ಜನ ಜಾಗೃತಿ ಅಗತ್ಯ
ಮಾನ್ಯರೆ,
ಕೇಂದ್ರ ಮತ್ತು ರಾಜ್ಯ ಸರಕಾರಗಳು ಭಾರತದ ಅನಿಷ್ಟ ಸಂಪ್ರದಾಯಗಳಲ್ಲಿ ಒಂದಾದ ಬಾಲ್ಯವಿವಾಹ ಪದ್ಧತಿಯನ್ನು ತಡೆಗಟ್ಟಲು ಹಲವು ಕಠಿಣ ಕಾಯ್ದೆ ಕಾನೂನುಗಳು ಜಾರಿಗೊಳಿಸಿದರೂ ಗ್ರಾಮೀಣ ಭಾಗದಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಜೀವಂತವಿದೆ. ಅದರಲ್ಲೂ ನಮ್ಮ ರಾಜ್ಯದ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ,ಬೆಳಗಾವಿ,ಬಾಗಲಕೋಟೆ,ವಿಜಯಪುರ,ಯಾದಗಿರಿ,ಕಲಬುರಗಿ,ರಾಯಚೂರು, ಕೊಪ್ಪಳ,ಬೀದರ, ಬಳ್ಳಾರಿ ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚು ನಡೆಯುತ್ತಿವೆ.
ಈ ಬಾಲ್ಯವಿವಾಹದಿಂದಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 182 ಬಾಣಂತಿಯರು ಮತ್ತು 3,706 ನವಜಾತ ಶಿಶುಗಳು ಮರಣ ಹೊಂದಿರುವ ಆಘಾತಕಾರಿ ಸಂಗತಿ ನಿಜಕ್ಕೂ ವಿಷಾದನೀಯ. ಅನಕ್ಷರಸ್ಥ ಬಡ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ 18 ವರ್ಷಗಳು ತುಂಬುವ ಮೊದಲೇ ವಿವಾಹ ಮಾಡಿ ಬಿಡುತ್ತಾರೆ. ಲೈಂಗಿಕತೆ ಮತ್ತು ಗರ್ಭಧಾರಣೆಯ ಕುರಿತು ಸ್ಪಷ್ಟ ಚಿತ್ರಣ ಮಾಹಿತಿ ಇರದ ಅಪ್ರಾಪ್ತ ವಯಸ್ಸಿನ ಬಾಲಕಿಯರು ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುತ್ತಾರೆ. ಇದರಿಂದಾಗಿ ಬಾಲಕಿಯರಲ್ಲಿ ಪೋಷಕಾಂಶಗಳು ಮತ್ತು ರಕ್ತ ಹೀನತೆಯ ಕೊರತೆ ಉಂಟಾಗಿ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ.
ಆದ್ದರಿಂದ ಈ ಅನಿಷ್ಟ ಬಾಲ್ಯವಿವಾಹ ಪದ್ಧತಿ ತಡೆಗಟ್ಟಲು ಬರೀ ಸರಕಾರ ಪ್ರಯತ್ನಿಸಿದರೆ ಸಾಲದು, ಪ್ರಜ್ಞಾವಂತ ಪ್ರತಿಯೊಬ್ಬ ನಾಗರಿಕನು ಅನಕ್ಷರಸ್ಥ ಪಾಲಕರಿಗೆ ಬಾಲ್ಯವಿವಾಹದಿಂದ ಮಕ್ಕಳ ಜೀವನದ ಮೇಲೆ ಬೀರುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು.





