ಉತ್ತರ ಪ್ರದೇಶ ಚುನಾವಣೆ: ಯಾವ ಪಕ್ಷಕ್ಕೆ ಮುಸ್ಲಿಮರ ಒಲವು?

ರಾಂಪುರ, ಡಿ.2: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಯಾದವೀಕಲಹ ಮುಗಿಲು ಮುಟ್ಟಿದ್ದರೆ, ರಾಜ್ಯದಲ್ಲಿ ನಿರ್ಣಾಯಕವಾಗಿರುವ ಮುಸ್ಲಿಂ ಮತದಾರರ ಒಲವು ಯಾವ ಪಕ್ಷದತ್ತ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ.
ಈ ಮಧ್ಯೆ ಜಾಮಾ ಮಸೀದಿಯ ಶಾಹಿ ಇಮಾಮ್ ಸಯೀದ್ ಅಹ್ಮದ್ ಬುಖಾರಿ ಹೇಳಿಕೆ ನೀಡಿ, "ಮುಸ್ಲಿಮರು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು ಹಾಗೂ ಸಮುದಾಯದ ಮುಖಂಡರು ಬೇರೆ ಆಯ್ಕೆ ಬಗ್ಗೆ ದೃಷ್ಟಿ ಹರಿಸಬೇಕು" ಎಂದು ಸಲಹೆ ಮಾಡಿರುವುದು ಕುತೂಹಲ ಹೆಚ್ಚಲು ಕಾರಣವಾಗಿದೆ.
2012ರ ವಿಧಾನಸಭಾ ಚುನಾವಣೆ ವೇಳೆ ಸಮಾಜವಾದಿ ಪಕ್ಷಕ್ಕೆ ಬಹಿರಂಗ ಬೆಂಬಲ ಸೂಚಿಸಿದ್ದು ಮಾತ್ರವಲ್ಲದೇ, ಮುಲಾಯಂ ಸಿಂಗ್ ಯಾದವ್ ಜತೆ ವೇದಿಕೆಯನ್ನೂ ಹಂಚಿಕೊಂಡಿದ್ದ ಬುಖಾರಿ, "ಅವರು ಮುಸ್ಲಿಮರಿಗೆ ವಂಚಿಸಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ಬೆಂಬಲಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಕುಟುಂಬದ ಐವರನ್ನು ಮಾತ್ರ ಲೋಕಸಭೆಗೆ ಆಯ್ಕೆ ಮಾಡಲಾಗಿತ್ತು. ಮುಸ್ಲಿಂ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಮಾಜವಾದಿ ಪಕ್ಷದ ಮುಖಂಡರು ವಿಫಲರಾಗಿದ್ದಾರೆ'' ಎಂದು ಬುಖಾರಿ ಕೆಂಡ ಕಾರಿದ್ದಾರೆ.
ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಪಾಠ ಕಲಿಸಬೇಕು. ಸಮುದಾಯದ ಮುಖಂಡರು ಬೇರೆ ಪಕ್ಷದ ಬಗ್ಗೆ ಯೋಚನೆ ಮಾಡಬೇಕು. ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಏನೂ ಮಾಡಿಲ್ಲ. 2012ರ ಚುನಾವಣೆಗೆ ಮುನ್ನ ಮುಲಾಯಂ ಸಿಂಗ್ ಮನವಿ ಮಾಡಿಕೊಂಡಾಗ, ಮುಸ್ಲಿಂ ಸಮುದಾಯಕ್ಕೆ ಶೇಕಡ 18ರಷ್ಟು ಮೀಸಲಾತಿ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ರಕ್ಷಿಸಲೂ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ 113 ಕೋಮುಗಲಭೆಗಳಾಗಿದ್ದು, 13 ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ರಾಜ್ಯದ ಆಡಳಿತಾತ್ಮಕ ಹುದ್ದೆಗಳಲ್ಲೂ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಬುಖಾರಿ ದೂರಿದ್ದಾರೆ.







