ಮಂಡ್ಯ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಹಲವು ಬಲಿ

ಮಂಡ್ಯ, ಜ.2: ಹೊಸ ವರ್ಷದ ಉತ್ಸಾಹ ಮತ್ತು ಕುಡಿತ ಹಲವರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹದ ಸಂಭ್ರಮದ ಆವೇಶದಲ್ಲಿ ಮತ್ತು ಕುಡಿತದ ಮತ್ತಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಮಂಡ್ಯ ನಿವಾಸಿಯಾಗಿರುವ 44 ವರ್ಷದ ಅಕ್ಮಲ್ ಪಾಶಾ ಅವರ ಕಾರು ಮದ್ದೂರು ತಾಲೂಕಿನಲ್ಲಿ ಶಿಂಷಾ ನದಿಗೆ ಬಿದ್ದು ಅವರು ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಇತರ ಮೂವರಿಗೆ ತೀವ್ರ ಗಾಯಗಳಾಗಿವೆ. ಹೊಸ ವರ್ಷದ ಸಂಭ್ರಮ ಆಚರಿಸಿ ಇವರು ವಾಪಸು ಬರುತ್ತಿದ್ದಾಗ ಈ ದುರಂತ ನಡೆದಿದೆ.
ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿರುವ 25 ವರ್ಷದ ಪ್ರಶಾಂತ್ ಅವರ ಕಾರು ಮಳವಳ್ಳಿ ತಾಲೂಕಿನ ಟಿಕೆ ಹಳ್ಳಿಯಲ್ಲಿ ರಸ್ತೆ ಬದಿಯಲ್ಲಿರುವ ಮರಕ್ಕೆ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಇತರ ಮೂವರು ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ. ಅವರು ಮಳವಳ್ಳಿಯ ಸಮೀಪ ತಮ್ಮ ಸ್ನೇಹಿತನ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಳವಳ್ಳಿ ತಾಲೂಕಿನಲ್ಲೇ ನಡೆದ ಮತ್ತೊಂದು ಪ್ರಕರಣದಲ್ಲಿ ಕೆಆರ್ ಪೇಟೆ ತಾಲೂಕಿನ 22 ವರ್ಷದ ಚೇತನ್ ಅವರು ನೆಲಮಾಕನಹಳ್ಳಿಯ ಬಳಿ ನಡೆದ ಕಾರು ಮತ್ತು ಬೈಕ್ ಢಿಕ್ಕಿ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಚೇತನ್ ಹಾಸನದ ಶ್ರವಣಬೆಳಗೊಳ ಕಾಲೇಜಿನ ಬಿಇ ವಿದ್ಯಾರ್ಥಿ.
ಇಬ್ಬರು ವ್ಯಕ್ತಿಗಳು ಶ್ರೀರಂಗಪಟ್ಟಣದಲ್ಲಿ ಬೈಕ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 55 ವರ್ಷದ ಶೇಷಗೌಡ ಮತ್ತು 50 ವರ್ಷದ ಶ್ರೀಧರ್ ಹೊಸ ವರ್ಷದಲ್ಲಿ ಸ್ನೇಹಿತರನ್ನು ಭೇಟಿಯಾಗಿ ವಾಪಾಸು ಬರುತ್ತಿದ್ದಾಗ ಆಗಿರುವ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮಳ್ಳವಳ್ಳಿ ತಾಲೂಕಿನ ಹೊಸಹಳ್ಳಿ ಬಳಿ ಹೊಸ ವರ್ಷದಂದು ಪಾನಮತ್ತರಾಗಿ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ. 40 ವರ್ಷದ ರಾಜೇಶ್ ಮದ್ಯ ಸೇವನೆ ಮಾಡಿ ತನ್ನ ಸ್ನೇಹಿತನಾದ 38 ವರ್ಷದ ಮಹೇಶ್ ಮೇಲೆ ತೀವ್ರ ಹಲ್ಲೆ ನಡೆಸಿದ್ದ. ಮಹೇಶ್‌ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಮಹೇಶನ ಮರಣದ ಸುದ್ದಿ ಕೇಳಿ ರಾಜೇಶ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ







