ಗುಟ್ಟು ಬಿಟ್ಟು ಕೊಡದ ಆರ್‌ಬಿಐ

ಹೊಸದಿಲ್ಲಿ, ಜ.2: ಕಳೆದ ವರ್ಷ ನವೆಂಬರ್ 8ರಂದು ಅಚಾನಕ್ ಆಗಿ ನೋಟು ಅಮಾನ್ಯದ ನಿರ್ಧಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಮುಂದಿಡುವ ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಅಭಿಪ್ರಾಯವನ್ನು ಕೇಳಿದ್ದರೆ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಈ ಪ್ರಶ್ನೆಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ವ್ಯಕ್ತಿಯೊಬ್ಬರು ಪ್ರಶ್ನಿಸಿದಾಗ ಅದು ಗುಟ್ಟು ಬಿಟ್ಟುಕೊಡಲಿಲ್ಲ. ಈ ವಿಷಯ ಮಾಹಿತಿ ಹಕ್ಕು ಅಡಿಯಲ್ಲಿ ಬಾರದೆ ಇರುವ ಕಾರಣ ವಿವರ ನೀಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.
ನೋಟು ಅಮಾನ್ಯದ ಘೋಷಣೆಗೆ ಮುನ್ನ ಮುಖ್ಯ ಆರ್ಥಿಕ ಸಚಿವ ಅರವಿಂದ್ ಸುಬ್ರಹ್ಮಣ್ಯಂ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸಲಹೆಯನ್ನು ಕೇಳಲಾಗಿತ್ತೆ? ಎಂದು ಅರ್ಜಿದಾರರು ಪ್ರಶ್ನಿಸಿದ್ದರು.
ಈ ರೀತಿಯ ಪ್ರಶ್ನೆ ಅಭಿಪ್ರಾಯ ಕೇಳುವುದಾಗುತ್ತದೆಯೇ ವಿನಾ ಮಾಹಿತಿ ಹಕ್ಕಿನಡಿ ಬರುವುದಿಲ್ಲ ಎನ್ನುವುದು ಆರ್‌ಬಿಐ ಹೇಳಿದೆ. ಆದರೆ ಮಾಜಿ ಮುಖ್ಯ ಮಾಹಿತಿ ಆಯುಕ್ತ ಎ.ಎನ್ ತಿವಾರಿ ಪ್ರಕಾರ ಈ ಪ್ರಶ್ನೆ ಅಭಿಪ್ರಾಯ ಎನಿಸುವುದಿಲ್ಲ. ಬದಲಾಗಿ ಅರ್ಜಿದಾರರು ವಾಸ್ತವಾಂಶವನ್ನು ಕೇಳಿದ್ದಾರೆ. ಇದನ್ನು ಅಭಿಪ್ರಾಯ ಕೇಳಿರುವುದು ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಹೇಗೆ ಅಭಿಪ್ರಾಯವಾಗಲಿದೆ. ಒಬ್ಬರ ಸಲಹೆ ಕೇಳಲಾಗಿದೆಯೇ ಇಲ್ಲವೇ ಎನ್ನುವುದು ದಾಖಲೆಯಾಗುತ್ತದೆ. ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಕಿತ್ತೇ ಎಂದು ಪ್ರಶ್ನಿಸಿದಲ್ಲಿ ಅದು ಅಭಿಪ್ರಾಯವಾಗುತ್ತಿತ್ತು. ಆದರೆ ಈಗಿನದು ವಾಸ್ತವಾಂಶದ ದಾಖಲೆ ಕೇಳಿರುವುದೇ ಆಗಿದೆ ಎಂದು ಮಾಜಿ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಹೇಳಿದ್ದಾರೆ. ಅವರು ಆರ್‌ಬಿಐ ಪ್ರತಿಕ್ರಿಯೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.







