ಸಮಾಜವಾದಿ ಪಕ್ಷದ ಮಹಾ ಅಧಿವೇಶನ ರದ್ದು

ಲಕ್ನೋ,ಜ.2: ಗುರುವಾರ(ಜ.5) ಕರೆಯಲಾಗಿದ್ದ ಸಮಾಜವಾದಿ ಪಕ್ಷದ ಮಹಾ ಅಧಿವೇಶನವನ್ನು ಇಂದು ಬೆಳಗ್ಗೆ ರದ್ದುಪಡಿಸಲಾಗಿದೆ.
ಮಹಾ ಅಧಿವೇಶನವನ್ನು ರದ್ದುಪಡಿಸಿರುವ ಮುಲಾಯಂ ಸಿಂಗ್ ಯಾದವ್ ಈವಾರದಲ್ಲಿ ಘೋಷಿಸಲ್ಪಡುವ ಅಸೆಂಬ್ಲಿ ಚುನಾವಣೆಗೆ ತಯಾರಿ ನಡೆಸಲು ತಮ್ಮ ಕ್ಷೇತ್ರಗಳಿಗೆ ವಾಪಸಾಗುವಂತೆ ಶಾಸಕರಿಗೆ ಸೂಚಿಸಿದ್ದಾರೆ ಎಂದು ಮುಲಾಯಂ ಸಹೋದರ ಶಿವಪಾಲ್ ಯಾದವ್ ತಿಳಿಸಿದ್ದಾರೆ.
ಪಕ್ಷದ ಹೆಚ್ಚಿನ ಕಾರ್ಯಕರ್ತರು ಹಾಗೂ ಶಾಸಕರು ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಯಾದವ್ ಜ.5 ರಂದು ನಡೆಯಬೇಕಾಗಿದ್ದ ಮಹಾ ಅಧಿವೇಶನವನ್ನು ರದ್ದುಪಡಿಸಿದ್ದಾರೆ ಎನ್ನಲಾಗಿದೆ.
ಲಕ್ನೋದಲ್ಲಿ ರವಿವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅಖಿಲೇಶ್ ಯಾದವ್ ತಂದೆ ಹಾಗೂ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ರನ್ನು ಪಕ್ಷದ ಮುಖ್ಯಸ್ಥನ ಸ್ಥಾನದಿಂದ ತೆಗೆದು ಹಾಕಿ ಮಾರ್ಗದರ್ಶಕ ಸ್ಥಾನವನ್ನು ನೀಡುವ ಮೂಲಕ ಪಕ್ಷ ವಿಭಜನೆಯಾಗಿತ್ತು.
ಪುತ್ರ ಅಖಿಲೇಶ್ ರವಿವಾರ ಕೈಗೊಂಡ ನಿರ್ಧಾರ ಅನಧಿಕೃತ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದರು. ಸಹೋದರ ಶಿವಪಾಲ್ ಯಾದವ್‌ರೊಂದಿಗೆ ಸೋಮವಾರ ದಿಲ್ಲಿಗೆ ತೆರಳಿರುವ ಮುಲಾಯಂ ಅಮರ್‌ಸಿಂಗ್‌ರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯನ್ನು ಉಳಿಸಿಕೊಳ್ಳಲು ಅಖಿಲೇಶ್ ಬಣದ ರಾಮ್ ಗೋಪಾಲ್ ಯಾದವ್ ದಿಲ್ಲಿಗೆ ಧಾವಿಸಿದ್ದು, ಚುನಾವಣಾ ಆಯೋಗವನ್ನು ಭೇಟಿಯಾಗಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಕೂಡ ಪಕ್ಷದ ಸೈಕಲ್ ಚಿಹ್ನೆಯನ್ನು ಉಳಿಸಿಕೊಳ್ಳಲು ಯತ್ನಿಸಲಿದ್ದಾರೆ.







