ಜಾತಿಯಾಧಾರಿತ ಮತಯಾಚನೆ ಸರಿಯಲ್ಲ
ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ಮಹತ್ವದ ತೀರ್ಪು

ಧರ್ಮ, ಜಾತ್ಯಾಧಾರಿತ ಮತ ಯಾಚನೆ ಸಲ್ಲ: ಸುಪ್ರೀಂ
ಹೊಸದಿಲ್ಲಿ, ಜ.2: ರಾಜಕೀಯ ಪಕ್ಷಗಳು ಜಾತಿ, ಧರ್ಮ, ಸಮುದಾಯ ಅಥವಾ ಭಾಷೆ ಆಧಾರದಲ್ಲಿ ಮತಯಾಚನೆ ಮಾಡುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಸಂವಿಧಾನಪೀಠ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(3)ರ ಅನ್ವಯ 4:3 ಬಹುಮತದೊಂದಿಗೆ ಈ ತೀರ್ಪು ನೀಡಿದೆ.
ಹಿಂದುತ್ವ ಪ್ರಕರಣಗಳಿಗೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸಂವಿಧಾನಪೀಠ, ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ಧರ್ಮಗಳಿಗೆ ಮನವಿ ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಆದರ್ಶ್ ಕುಮಾರ್ ಗೋಯಲ್, ಉದಯ್ ಉಮೇಶ್ ಲಲಿತ್ ಅವರು ಈ ಪೀಠದಲ್ಲಿದ್ದರು.
ಚುನಾವಣೆಯನ್ನು ಜಾತ್ಯತೀತವಾಗಿ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ಚುನಾವಣೆ ವಿಚಾರಕ್ಕೆ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇಂಥ ಕ್ರಮ ಅನುಸರಿಸುವ ಅಭ್ಯರ್ಥಿಗಳು ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಹೇಳಿದೆ.
ಜಾತಿ, ವರ್ಣ, ಭಾಷೆ ಅಥವಾ ಸಮುದಾಯ ವಿಚಾರಗಳನ್ನು ಮತ ಯಾಚನೆಯ ಸಾಧನವಾಗಿ ಬಳಸುವುದನ್ನು ಕೂಡಾ ನಿಷೇಧಿಸಿದೆ.
ದೇವರು ಹಾಗೂ ಮನುಷ್ಯರ ನಡುವಿನ ಸಂಬಂಧ ವೈಯಕ್ತಿಕ ಆಯ್ಕೆಯ ವಿಷಯವಾಗಿದ್ದು, ಇದರಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಸರಕಾರಕ್ಕೆ ಇಲ್ಲ ಎಂದೂ ಸ್ಪಷ್ಟವಾಗಿ ಹೇಳಿದೆ. ಹಿಂದುತ್‌ವವನ್ನು ಜೀವನಮಾರ್ಗ ಎಂದು ವ್ಯಾಖ್ಯಾನಿಸಿರುವ 1995ರ ತೀರ್ಪನ್ನು ಮರುಪರಿಶೀಲನೆ ನಡೆಸುವುದಿಲ್ಲ ಎಂದೂ ಸುಪ್ರೀಂಕೋರ್ಟ್ ಹೇಳಿದೆ.
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ 1995ರ ತೀರ್ಪಿನ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಏಳು ಮಂದಿ ನ್ಯಾಯಮೂರ್ತಿಗಳ ಪೀಠ ಈ ಆದೇಶ ಹೊರಡಿಸಿದೆ. 1995ರಲ್ಲಿ ಮನೋಹರ ಜೋಶಿ ಪ್ರಕರಣದ ಬಗ್ಗೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರು, ಹಿಂದುತ್ವವನ್ನು ಭಾರತೀಯರ ಜೀವನಮಾರ್ಗ ಹಾಗೂ ಭಾರತೀಯ ಸಂಸ್ಕೃತಿಯ ರೂಢಿ ಎಂದು ಅಭಿಪ್ರಾಯಪಟ್ಟಿದ್ದರು.







