ಪೊಲೀಸ್ ಠಾಣೆಗೆ ನುಗ್ಗಿ ಅಕ್ರಮ ಬಂಧನದಲ್ಲಿದ್ದ ಯುವತಿಯನ್ನು ರಕ್ಷಿಸಿದ ನ್ಯಾಯಾಧೀಶೆ

ಕೋಲ್ಕತಾ, ಜ.2: ಪಶ್ಚಿಮದ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನ್ಯಾಯಾಧೀಶೆಯೊಬ್ಬರು ಪೊಲೀಸ್ ಠಾಣೆಯೊಳಗೆ ನುಗ್ಗಿ ಅಕ್ರಮವಾಗಿ ಬಂಧಿಸಲ್ಪಟ್ಟಿದ್ದ 25ರ ಹರೆಯದ ಮಹಿಳೆಯನ್ನು ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆಯಿಂದ ಯುವತಿಯನ್ನು ಬಂಧಮುಕ್ತಗೊಳಿಸಿರುವ ನ್ಯಾಯಾಧೀಶೆ ನ್ಯಾಯಾಂಗದಲ್ಲಿ ಇತಿಹಾಸ ನಿರ್ಮಿಸಿದರು. ನಾಡಿಯಾ ಜಿಲ್ಲೆಯಲ್ಲಿ ಇನ್ನೊಬ್ಬ ನ್ಯಾಯಾಧೀಶರು 15 ದಿನಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದರು. ಈ ಮೂಲಕ ಅತ್ಯಂತ ವೇಗವಾಗಿ ನ್ಯಾಯಾಂಗ ವಿಚಾರಣೆಯನ್ನು ಪೂರ್ತಿಗೊಳಿಸಿ ದಾಖಲೆ ನಿರ್ಮಿಸಿದ್ದರು.
ರಣಘಾಟ್‌ನ ಹೆಚ್ಚುವರಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸಂಘಮಿತ್ರ ಪೊದ್ದಾರ್ ಬುಧವಾರ 25ರ ಪ್ರಾಯದ ಯುವತಿಯ ತಂದೆ ಗೋವಿಂದ್ ಬಿಸ್ವಾಸ್ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸುತ್ತಿದ್ದಾಗ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಲ್ಪಟ್ಟ ವಿಷಯ ಗೊತ್ತಾಗಿತ್ತು.
ಪೊಲೀಸರು ತನ್ನ ಮಗಳನ್ನು ಡಿ.23 ರಂದು ಬೆಳಗ್ಗೆ ತಮ್ಮ ವಶಕ್ಕೆ ಪಡೆದಿದ್ದರು.
ಆದರೆ, ಕಳೆದ 5 ದಿನಗಳಿಂದ ಯಾವುದೇ ಪ್ರಕರಣವನ್ನು ದಾಖಲಿಸದೇ ಪೊಲೀಸ್ ಸ್ಟೇಶನ್‌ನಲ್ಲೇ ಅಕ್ರಮವಾಗಿ ಉಳಿಸಿಕೊಂಡಿದ್ದಾರೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಪೊಲೀಸ್ ಸ್ಟೇಶನ್‌ನಲ್ಲಿರುವ ಬಗ್ಗೆ ಯಾವುದೇ ಕಾಗದ ಪತ್ರಗಳೂ ಇಲ್ಲ ಎಂದು ನ್ಯಾಯಾಲಯದಲ್ಲಿ ಯುವತಿಯ ತಂದೆ ಹೇಳಿಕೆ ನೀಡಿದ್ದರು.
ನ್ಯಾಯಾಧೀಶೆ ಸಂಘಮಿತ್ರ ವಿಚಾರಣೆಯ ದಿನವಾದ ಬುಧವಾರ ಮಧ್ಯಾಹ್ನ ಯುವತಿಯನ್ನು ಅಕ್ರಮವಾಗಿ ಬಂಧಿಸಲ್ಪಟ್ಟ ಬಾಂಗ್ಲಾದೇಶ ಗಡಿಗೆ ಹತ್ತಿರವಿರುವ ಹನ್ಸ್‌ಖಲಿ ಪೊಲೀಸ್ ಸ್ಟೇಶನ್‌ಗೆ ತೆರಳಿ ತನ್ನೊಂದಿಗೆ ಮಹಿಳೆಯನ್ನು ಕರೆದುಕೊಂಡು ಕೋರ್ಟ್‌ಗೆ ವಾಪಸಾದರು. ಬಳಿಕ ನ್ಯಾಯಾಧೀಶರು ಯುವತಿಯನ್ನು ಮಹಿಳಾ ವಸತಿ ಗೃಹಕ್ಕೆ ಕಳುಹಿಸಿಕೊಟ್ಟರು.
ಪೊಲೀಸ್ ಅಧಿಕಾರಿಗಳು ಯುವತಿಯ ಮೇಲೆ ಯಾವ ಪ್ರಕರಣವಿದೆ ಎಂದು ಸ್ಪಷ್ಟಪಡಿಸಿಲ್ಲ. ಆಕೆ ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆಯ ಮೇಲೆ ಬಂಧಿಸಲಾಗಿದೆ. ಆಕೆ ಬಾಂಗ್ಲಾದ ಗಡಿಯ ಸಮೀಪ ವಾಸಿಸುತ್ತಿದ್ದರು ಎಂದು ಪೊಲೀಸ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಯ ಬಳಿಕ ಪೊಲೀಸರ ವಿರುದ್ಧ ನಾವು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ನಾಡಿಯಾ ಪೊಲೀಸ್ ಅಧಿಕಾರಿ ಶೀಶ್ ರಾಮ್ ಝಜಾರಿಯ ಹೇಳಿದ್ದಾರೆ.
ಇದು ನ್ಯಾಯಾಂಗ ಸಕ್ರಿಯವಾದಕ್ಕಿರುವ ಉತ್ತಮ ನಿದರ್ಶನವಾಗಿದ್ದು, ನನ್ನ ವೃತ್ತಿಜೀವನದಲ್ಲಿ ಇಂತಹ ವಿಷಯ ಕೇಳಿಲ್ಲ ಎಂದು ಹಿರಿಯ ಅಡ್ವಕೇಟ್ ಮಿಲನ್ ಮುಖರ್ಜಿ ಹೇಳಿದ್ದಾರೆ.







