ಸೊರಬ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಧರಣಿ
.jpg)
ಸಾಗರ, ಜ.2: ಇಲ್ಲಿನ ಸೊರಬ ರಸ್ತೆ ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ಸಾಗರ ಜನ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಶಿವಪ್ಪನಾಯಕ ವೃತ್ತದಲ್ಲಿ ರಸ್ತೆತಡೆ ನಡೆಸಿ ಧರಣಿ ನಡೆಸಿದರು.
ಕಳೆದ ಅನೇಕ ವರ್ಷಗಳಿಂದ ಶಿವಪ್ಪನಾಯಕ ವೃತ್ತದಿಂದ ಹಾದು ಹೋಗುವ ಸೊರಬ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಒತ್ತಾಯಿಸುತ್ತಿದ್ದು, ಆಡಳಿತ ನಡೆಸುವವರು ಕಿವಿ ಕೇಳದಂತೆ ಕುಳಿತ್ತಿದ್ದಾರೆ ಎಂದು ಆರೋಪಿಸಿದರು.
ಸೊರಬ ರಸ್ತೆ ಅಗಲೀಕರಣ ಪ್ರಕ್ರಿಯೆ ತಡೆಯಲು ಪರೋಕ್ಷವಾಗಿ ಯಾರೋ ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಸೊರಬ ರಸ್ತೆ ಕಿಷ್ಕಿಂದೆಯಾಗಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ತೀರ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೆ ಈ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಧೂಳು ಹಾಗೂ ಹೊಂಡಗುಂಡಿಗಳಿಂದಾಗಿ ಪ್ರತಿದಿನ ಒಂದಿಲ್ಲೊಂದು ಅಪಘಾತವಾಗುತ್ತಿದ್ದು, ಜನರು ಸಮಸ್ಯೆಯಲ್ಲಿ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಾಗರಕ್ಕೆ ಬಂದಿದ್ದ ಲೋಕೋಪಯೋಗಿ ಸಚಿವರು ಸೊರಬ ರಸ್ತೆಯನ್ನು ಪರಿಶೀಲಿಸಿ, ಅಗಲೀಕರಣ ಮಾಡುವ ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಭರವಸೆ ಈತನಕ ಈಡೇರಿಸಿಲ್ಲ. ರಸ್ತೆ ಅಗಲೀಕರಣ ಹಾಗೂ ನಿವಾಸಿಗಳಿಗೆ ಪರಿಹಾರ ಕಲ್ಪಿಸಲು ಸುಮಾರು 60 ಕೋಟಿ ರೂ. ಬೇಕಾಗುತ್ತದೆ ಎಂದು ಯೋಜನೆ ತಯಾರಿಸಲಾಗಿದೆ. ಅದನ್ನು ತಕ್ಷಣ ಸರಕಾರ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪೊಲೀಸರೊಂದಿಗೆ ಚಕಮಕಿ: ರಸ್ತೆ ತಡೆಗೆ ಇಲಾಖೆಯಿಂದ ಒಪ್ಪಿಗೆ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ರಸ್ತೆ ತಡೆ ಮಾಡಿದ ವೇದಿಕೆ ಕಾರ್ಯಕರ್ತರನ್ನು ತೆರವುಗೊಳಿಸಲು ಮುಂದಾದಾಗ ವೇದಿಕೆ ಅಧ್ಯಕ್ಷ ಸುರೇಶ್ ಇದನ್ನು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಜನ ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್, ಪ್ರಮುಖರಾದ ಶಶಿ ಜಂಬಗಾರು, ವೆಂಕಟೇಶ್, ಖುದ್ದೂಸ್, ಸಂದೀಪ್, ಮಂಜು ಮೇಸ್ತ್ರಿ, ಅಣ್ಣಪ್ಪ ಇನ್ನಿತರರು ಭಾಗವಹಿಸಿದ್ದರು.







