'ದಂಗಲ್' ಎಫೆಕ್ಟ್: 100 ಕುಸ್ತಿಪಟುಗಳಿಗೆ ಲಭಿಸಲಿದೆ ಮ್ಯಾಟ್

ಚಂಡೀಗಢ, ಜ.2: ಕುಸ್ತಿ ಕ್ರೀಡೆಯನ್ನು ಆಧರಿಸಿದ್ದ ಆಮಿರ್ ಖಾನ್ ಅಭಿನಯದ 'ದಂಗಲ್' ಚಿತ್ರದ ಯಶಸ್ಸಿನ ಬಳಿಕ ಹರ್ಯಾಣ ಸರಕಾರ ರಾಜ್ಯದ 100ರಷ್ಟು ಕುಸ್ತಿಪಟುಗಳಿಗೆ ಕುಸ್ತಿ ಅಭ್ಯಾಸದ ಅಖಾಡದಲ್ಲಿ ಬಳಕೆಯಾಗುವ ಮ್ಯಾಟ್‌ಗಳನ್ನು ಒದಗಿಸಲು ನಿರ್ಧರಿಸಿದೆ. ಇದು 'ದಂಗಲ್' ಚಿತ್ರದಿಂದ ಪ್ರೇರಣೆಗೊಂಡು ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
'ದಂಗಲ್' ಚಿತ್ರದಲ್ಲಿ ಕುಸ್ತಿಪಟುವಿನ ತಂದೆ ತನ್ನ ಇಬ್ಬರು ಪುತ್ರಿಯರನ್ನು ಅಂತಾರಾಷ್ಟ್ರೀಯ ಕ್ರೀಡಾಪಟುವನ್ನಾಗಿಸಲು ಹೋರಾಟ ನಡೆಸುತ್ತಿರುವ ಕಥೆ ಮನತಟ್ಟುವಂತಿತ್ತು.
'ದಂಗಲ್' ಚಿತ್ರಕ್ಕೆ ಸ್ಫೂರ್ತಿಯಾಗಿರುವ ಕುಸ್ತಿ ಚಾಂಪಿಯನ್‌ಗಳಾದ ಗೀತಾ ಫೋಗತ್,ಬಬಿತಾ ಫೋಗತ್ ಹಾಗೂ ಅವರ ಕೋಚ್ -ತಂದೆ ಮಹಾವೀರ್ ಸಿಂಗ್ ಫೋಗತ್‌ರನ್ನು ಭೇಟಿಯಾಗಿರುವ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ , ರಾಜ್ಯದ ಶ್ರೇಷ್ಠ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಸಲುವಾಗಿ ತನ್ನ ಸರಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಿದೆ ಎಂದು ಹೇಳಿದ್ದಾರೆ.
ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕ್ರೀಡಾಪಟುಗಳಿಗೆ ಹೊಸ ನಿಯಮವನ್ನು ರಚಿಸಲಾಗುತ್ತದೆ ಎಂದು ಖಟ್ಟರ್ ಹೇಳಿದ್ದಾರೆ







