ಲೆಫ್ಟಿನೆಂಟ್ ಗವರ್ನರ್ ರ ವಾಟ್ಸ್ ಆಪ್ ಗ್ರೂಪ್ ನಲ್ಲಿ ಅಶ್ಲೀಲ ವೀಡಿಯೊ !

ಪುದುಚೇರಿ, ಜ. 2 : ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಪ್ರಾರಂಭಿಸಿದ ಅಧಿಕೃತ ವಾಟ್ಸ್ ಆಪ್ ಗ್ರೂಪ್ ಒಂದಕ್ಕೆ ಹಿರಿಯ ಅಧಿಕಾರಿಯೊಬ್ಬ ಅಶ್ಲೀಲ ವೀಡಿಯೋವೊಂದನ್ನು ಹಾಕಿದ ಘಟನೆ ನಡೆದಿದೆ.
ಅಧಿಕಾರಿಯನ್ನು ಕಿರಣ್ ಬೇಡಿ ಅವರು ಅಮಾನತು ಮಾಡಿದ್ದು ಈಗ ಅದು ಲೆಫ್ಟಿನೆಂಟ್ ಗವರ್ನರ್ ಹಾಗು ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿದೆ.
ಕಿರಣ್ ಬೇಡಿ ಅವರ ನಿರ್ದೇಶನದಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಹಾಗು ಜನರ ಅಹವಾಲು ತಿಳಿಯಲು ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ಅಧಿಕೃತವಾಗಿ ಪ್ರಾರಂಭಿಸಲಾದ ವಾಟ್ಸ್ ಗ್ರೂಪ್ ಆಗಿತ್ತು ಇದು. ಇದರಲ್ಲಿ ಹಿರಿಯ ಅಧಿಕಾರಿಗಳಿದ್ದರು.
ಅಲ್ಲಿನ ಸಹಕಾರಿ ಸೊಸೈಟಿಗಳ ರಿಜಿಸ್ಟ್ರಾರ್ ಹಾಗು ಜಂಟಿ ನಿರ್ದೇಶಕ ಮಟ್ಟದ ಅಧಿಕಾರಿ ಈ ಗ್ರೂಪ್ ನಲ್ಲಿ ಆಕ್ಷೇಪಾರ್ಹ ಅಶ್ಲೀಲ ಕ್ಲಿಪ್ ಒಂದನ್ನು ಹಾಕಿ ಬಿಟ್ಟರು. ಇದಕ್ಕಾಗಿ ಅವರನ್ನು ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಗೆ ಕರೆಸಿ ವಿವರಣೆ ಕೇಳಲಾಗಿತ್ತು.
ತಾನು ಅದನ್ನು ಡಿಲೀಟ್ ಮಾಡಲು ಹೋದಾಗ ಕೈತಪ್ಪಿ ಅದು ಗ್ರೂಪ್ ಗೆ ಹೋಯಿತು ಎಂದು ಆ ಅಧಿಕಾರಿ ವಿವರಣೆ ಕೊಟ್ಟರು. ಇದರಿಂದ ತೃಪ್ತರಾಗದ ಕಿರಣ್ ಅವರನ್ನು ಅಮಾನತು ಮಾಡಲು ಆದೇಶ ಹೊರಡಿಸಿದರು.
ಆದರೆ ಈಗ ಈ ವಿಷಯ ಸರ್ಕಾರ ಹಾಗು ಕಿರಣ್ ನಡುವೆ ಜಟಾಪಟಿಗೆ ತಿರುಗಿದೆ. ಕಿರಣ್ ಬೇಡಿಯವರು ಜನಪ್ರತಿನಿಧಿಗಳನ್ನು ಕಡೆಗಣಿಸಿ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. ವಾಟ್ಸ್ ಆಪ್ ಗ್ರೂಪ್ ನಲ್ಲಿ ನಿರ್ದೇಶನ ನೀಡುವ ವ್ಯವಸ್ಥೆ ಬೇರೆಲ್ಲೂ ಇಲ್ಲ. ಆದ್ದರಿಂದ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಅಲ್ಲಿನ ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ಆಗ್ರಹಿಸಿದೆ.
ಈ ಹಿಂದೆಯೂ ಕಿರಣ್ ಬೇಡಿ ಹಾಗು ಪುದುಚೇರಿಯ ವಿ . ನಾರಾಯಣಸ್ವಾಮಿ ಸರ್ಕಾರದ ನಡುವೆ ತಿಕ್ಕಾಟ ನಡೆದಿದ್ದವು . ಆದರೆ ಅವುಗಳನ್ನು ಶೀಘ್ರ ಬಗೆಹರಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿ ವಿವಾದ ಉಲ್ಬಣಿಸುವ ಸಾಧ್ಯತೆ ಇದೆ.







