ಸಂಸದರಿಂದ ದ.ಕ. ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ : ಬಂಟ್ವಾಳ ಜೆಡಿಎಸ್, ಎಸ್‌ಡಿಪಿಐ, ಪಿಎಫ್‌ಐ ಖಂಡನೆ
ಬಂಟ್ವಾಳ, ಡಿ. 2: ಕೆಲವು ಸಮಯದ ಹಿಂದೆ ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆ ಅಪರಾಧಿಗಳನ್ನು ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲಾಗುವುದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದೆ.
ಸಂಸದರ ಹೇಳಿಕೆಯನ್ನು ಬಂಟ್ವಾಳ ತಾಲೂಕು ಜೆಡಿಎಸ್ ಮುಖಂಡ ಹಾರೂನ್ ರಶೀದ್ ತೀವ್ರವಾಗಿ ಖಂಡಿಸಿದ್ದಾರೆ.
ಯುವಕನೋರ್ವನ ಕೊಲೆ ಆರೋಪಿಗಳನ್ನು ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿರುವ ಸಂಸದ ನಳೀನ್ ಕುಮಾರ್ ಕಟೀಲ್‌ರವರ ಹೃದಯದಲ್ಲಿರುವ ನಿಜವಾದ ಅಜೆಂಡ ಹೊರ ಬಿದ್ದಿದೆ. ನಳೀನ್ ಕುಮಾರ್ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದ ಶುರುವಿನಲ್ಲಿ ಇಂತದ್ದೇ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದರು. ಆ ಬಗ್ಗೆ ಹಲವು ಸಾಕ್ಷ್ಯಾಧರಗಳಿದ್ದರೂ ಪೊಲೀಸರು ಕ್ರಮ ಜರಗಿಸದೆ ಇರುವುದರಿಂದ ಅವರ ಹೃದಯದಲ್ಲಿ ತುಂಬಿರುವ ಗೋಳ್ವಾಲ್ಕರ್ ಅಜೆಂಡಾವನ್ನು ಅವರು ಮತ್ತೆ ಬಹಿರಂಗವಾಗಿ ಹೊರ ಹಾಕಿದ್ದಾರೆ ಎಂದು ಆರೋಪಿಸಿದರು .
ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡಿದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಖಂಡನೆಯನ್ನಾಗಲೀ, ಯಾವುದೇ ಹೇಳಿಕೆಯನ್ನಾಗಲೀ ನೀಡದೆ ಮೌನ ಸಮ್ಮತಿ ನೀಡಿರುವುದು ಕೂಡಾ ಖಂಡನೀಯವಾಗಿದೆ ಎಂದು ಹಾರೂನ್ ರಶೀದ್ ತಿಳಿಸಿದ್ದಾರೆ.
ಸಂಸದರ ಹೇಳಿಕೆಯನ್ನು ಖಂಡಿಸಿರುವ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಲೋಕಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಸುವ ಸಂಸದರೊಬ್ಬ ತಾನು ಪ್ರತಿನಿಧಿಸುವ ಜಿಲ್ಲೆಗೆಯೇ ಬೆಂಕಿ ಹಚ್ಚಲು ಹೊರಟಿರುವುದಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಇಂತಹ ಸಂಸದರಿಂದ ಜಿಲ್ಲೆಯಲ್ಲಿ ಅಶಾಂತಿ ಹಾಗೂ ಕೋಮು ಗಲಭೆ ಸಂಭವವಿದೆ. ಕೂಡಲೆ ಸಂಸದ ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು ಸಂಸದರ ಹೇಳಿಕೆಯನ್ನು ಖಂಡಿಸಿ, ಸಂಘ ಪರಿವಾರದ ಹಿನ್ನೆಲೆಯಿರುವ ಸಂಸದ ನಳೀನ್ ಕುಮಾರ್ ಕಟೀಲ್ ಮುಸ್ಲಿಮರನ್ನು ಗುರಿಯಾಗಿಸಿ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆಯನ್ನು ನೀಡಿದ್ದಾರೆ. ಸಂಸದರ ಈ ಹೇಳಿಕೆಯಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಸಂಸದರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು. ರಾಜ್ಯ ಸರಕಾರ ಕೂಡಾ ಸಂಸದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.







