ಪುತ್ತೂರು ಬಾರ್ ಅಸೋಸಿಯೇಶನ್ ಪದಗ್ರಹಣ ಸಮಾರಂಭ

ಪುತ್ತೂರು , ಜ.2 : ವಕೀಲರು ಇಂಗ್ಲೀಷ್‌ನಲ್ಲಿ ವ್ಯವಹರಿಸಿದರೆ ಮಾತ್ರ ತಾನು ಶ್ರೇಷ್ಠ ವಕೀಲನಾಗುತ್ತೇನೆ ಎಂಬ ಭ್ರಮೆಯನ್ನು ಬಿಟ್ಟು ಪರಕೀಯರ ದಾಸ್ಯ ಭಾವನೆಯಿಂದ ಹೊರ ಬಂದು ರಾಜ್ಯ ಭಾಷೆಯಲ್ಲೇ ವ್ಯವಹರಿಸುವ ಮೂಲಕ ದೇಶೀಯ ಚಿಂತನೆ ಹುಟ್ಟುಹಾಕಬೇಕು ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪಿ.ಪಿ. ಹೆಗ್ಡೆ ಹೇಳಿದರು.
ಅವರು ಸೋಮವಾರ ಪುತ್ತೂರು ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪುತ್ತೂರು ಬಾರ್ ಅಸೋಸಿಯೇಶನ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದ ಕಲಾಪಗಳು ಆಯಾ ರಾಜ್ಯದ ಮಾತೃಭಾಷೆಯಲ್ಲಿಯೇ ಸಂಪೂರ್ಣವಾಗಿ ನಡೆಯಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಆದರೆ ನಾವಿನ್ನೂ ಬ್ರಿಟೀಷರ ದಾಸ್ಯದ ಸಂಕೇತದಲ್ಲಿಯೇ ಉಳಿದಿದ್ದೇವೆ ಎಂದ ಅವರು ಈ ಸ್ಥಿತಿ ಬದಲಾಗಬೇಕಾದರೆ ವಕೀಲರು ಮನಸ್ಸು ಮತ್ತು ಧೈರ್ಯ ಮಾಡಬೇಕು ಎಂದರು.
ಹೈಕೋರ್ಟನ್ನು ಹೊರತುಪಡಿಸಿ ರಾಜ್ಯದ ಮಿಕ್ಕೆಲ್ಲ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕನ್ನಡ ವಾದ, ಕನ್ನಡ ಹೇಳಿಕೆಗಳನ್ನು ಸ್ವೀಕರಿಸುತ್ತಾರೆ. ಮೈಸೂರು ಮತ್ತು ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಕನ್ನಡದಲ್ಲಿ ವಾದ ಮಾಡುವ ವಕೀಲರು ದೊಡ್ಡ ಪ್ರಮಾಣದಲ್ಲಿದ್ದಾರೆ. ಬೆಂಗಳೂರು ಮತ್ತು ಕರಾವಳಿ ಜಿಲ್ಲೆ ಸೇರಿದಂತೆ ಉಳಿದ ಕಡೆಗಳಲ್ಲಿ ಇದು ತೀರಾ ಕಡಿಮೆಯಿದೆ ಎಂದರು.
ಅಪರಾಧ ದಂಡ ಸಂಹಿತೆ, ಸಾಕ್ಷಿ ಕಾಯಿದೆ ಸೇರಿದಂತೆ ಹತ್ತು ಹಲವು ಕಾನೂನುಗಳು ಈಗಲೂ ಬ್ರಿಟಿಷ್ ಸರಕಾರ ಇರುವಾಗ ಜಾರಿಗೆ ತಂದಿರುವಂತೆಯೇ ಮುಂದುವರಿದಿದೆ. ಆಗ ಬಳಸಲಾಗುತ್ತಿದ್ದ ಕಪ್ಪು ಕೋಟನ್ನೇ ಈಗಲೂ ವಕೀಲರು ಧರಿಸುತ್ತಿದ್ದಾರೆ. ಬ್ರಿಟೀಷರು ಇಲ್ಲದಿದ್ದರೂ ಅವರು ಬಿಟ್ಟು ಹೋದ ಅಂಶಗಳೇ ನಮ್ಮನ್ನು ಆಳುತ್ತಿವೆ ಎಂದರು.
ವಕೀಲರ ಸಂಘ ಎಂಬುದು ಟ್ರೇಡ್ ಯೂನಿಯನ್ ಆಗಬಾರದು. ಯೂನಿಯನ್‌ಗಳಲ್ಲಿರುವ ಸಿದ್ಧಾಂತ, ಸಂಘರ್ಷ ನಿರಂತರವಾಗಿ ಇರುತ್ತದೆ. ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ ಇರಬೇಕು , ಬಳಿಕ ವಕೀಲರ ಸಂಘ ಸಹಕಾರ ತತ್ವದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ನೂತನ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಉಪಾಧ್ಯಕ್ಷ ಮಹಾಬಲ ಗೌಡ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ, ಕೋಶಾಧಿಕಾರಿ ಕುಮಾರನಾಥ್ ಎಸ್., ಜತೆ ಕಾರ್ಯದರ್ಶಿ ದೀಪಕ್ ಬೊಳುವಾರ್ ಅವರ ತಂಡಕ್ಕೆ ನಿರ್ಗಮನ ಅಧ್ಯಕ್ಷರ ತಂಡ ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಮಾಡಿದರು.
ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ರಾಮಚಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ. ಬಸವರಾಜ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಂ. ವಿಜಯ್, ಕರ್ನಾಟಕ ವಕೀಲರ ಪರಿಷತ್ ಸದಸ್ಯ ರವೀಂದ್ರನಾಥ ರೈ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಕೆ.ಜಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಪುತ್ತೂರಿನ ಐವರು ಹಿರಿಯ ವಕೀಲರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ವಕೀಲರಾದ ಮಹಾಬಲ ಗೌಡ ಸ್ವಾಗತಿಸಿದರು. ಮನೋಹರ ಕೆ.ವಿ. ಕಾರ್ಯಕ್ರಮ ನಿರ್ವಹಿಸಿದರು.







