ಪ್ರಚೋದನಕಾರಿ ಹೇಳಿಕೆ: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು,ಜ.2: ದ.ಕ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೇಲ್ ಕಾರ್ತಿಕ್ ರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ . ಅವರ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್‌ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥನ್ ರೈ ಮತನಾಡುತ್ತಾ, ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎನ್ನುವ ಮೂಲಕ ಇಲ್ಲಿನ ಸಂಸದರು ಜಿಲ್ಲೆಯ ಕೋಮು ಸೌರ್ಹಾದತೆಗೆ ಹಾನಿಯುಂಟು ಮಾಡುವ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಯುವ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ. ಒಂದು ಕಡೆ ನೇತ್ರಾವತಿ ನದಿ ತಿರುವು ವಿಚಾರದಲ್ಲಿ ಜಿಲ್ಲೆಯ ಜನತೆಗಾಗಿ ಹೋರಾಟ ನಡೆಸುವುದಾಗಿ ಹೇಳುವ ನಳಿನ್ ಕುಮಾರ್ ಇನ್ನೊಂದು ಕಡೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಈ ರೀತಿ ಬೆಂಕಿ ಹಚ್ಚುವ ಕೆಲಸಕ್ಕಿಳಿದರೆ ಕಾಂಗ್ರೆಸ್ ಅದನ್ನು ಶಮನ ಮಾಡಲು ಸಿದ್ಧವಿದೆ. ಕೊಣಾಜೆಯ ಕಾರ್ತಿಕ್ ರಾಜ ಅಮಾಯಕ. ಆತನ ಕೊಲೆ ಪ್ರಕರಣದ ಬಗ್ಗೆ ನಿಷ್ಪಕ್ಷವಾದ ತನಿಖೆಯಾಗಬೇಕೆನ್ನುವುದು ನಮ್ಮ ಆಗ್ರಹವಾಗಿದೆ. ಈ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ ಎಂದು ಮಿಥುನ್ ರೈ ತಿಳಿಸಿದರು.
ದೇಶದ ಪ್ರಧಾನಿ ನೋಟು ನಿಷೇಧದ ಬಳಿಕ ನನಗೆ 50 ದಿನ ಅವಕಾಶ ನೀಡಿ ಎಂದು ಹೇಳಿ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದ್ದಾರೆ. ಕಳೆದ 50 ದಿನಗಳಲ್ಲಿ ಬಡವರು ಮತ್ತಷ್ಟು ಬಡವರಾದರು. 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಪ್ರಧಾನಿ ಹಣಕಾಸು ಸಚಿವರು ಮಾಡುವ ಬಜೆಟ್ ಭಾಷಣವನ್ನು ಮೊದಲೇ ಮಾಡಿ ಮುಗಿಸಿದ್ದಾರೆ ಎಂದು ಮಿಥುನ್ ರೈ ಟೀಕಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು,ಮನಪಾ ಸದಸ್ಯ ಪ್ರವೀಣ್‌ಚಂದ್ರ ಆಳ್ವಾ ಸಭೆಯನ್ನುದ್ದೇಶಿಸಿ ಮಾತನಾಡಿದರು.







