ನಳಿನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದಸಂಸ ಒತ್ತಾಯ
ಮಂಗಳೂರು, ಜ. 2: ರವಿವಾರ ಕೋಣಾಜೆ ಪೋಲಿಸ್ ಠಾಣೆ ಎದುರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ‘‘ಕಾರ್ತಿಕ್‌ರಾಜ್ ಹಂತಕರನ್ನು 10 ದಿನಗಳೊಳಗೆ ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ’’ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ವಿವಾದಾತ್ಮಕ ಹೇಳಿಕೆಯನ್ನು ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತೀವ್ರವಾಗಿ ಖಂಡಿಸಿದೆ.
ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಸಂವಿಧಾನ ಬಾಹಿರವಾಗಿ ನೀಡಿದ ಇಂತಹ ಅವಿವೇಕತನದ ಹಾಗೂ ಜಿಲ್ಲೆಯನ್ನೇ ಅಭದ್ರತೆಗೆ ಕೊಂಡೊಯ್ಯುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್ ತಿಳಿಸಿದ್ದಾರೆ.
ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿ ಜಿಲ್ಲೆಯ ಜನರ ಕೋಮು ಸಾಮರಸ್ಯವನ್ನು ಕೆಡಿಸಲು ಹವಣಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಮೇಲೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ಮಾನವ್ ಸಮಾನತಾ ಮಂಚ್ ಖಂಡನೆ
ಜಿಲ್ಲೆಗೆ ಬೆಂಕಿ ಹಚ್ಚುವ ಬಗ್ಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್‌ರ ಹೇಳಿಕೆಯನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.
ಇಂತಹ ಉದ್ರೇಕಕಾರಿ ಹೇಳಿಕೆಗಳು ಸಂಸತ್ ಸದಸ್ಯರಿಗೆ ಶೋಭೆ ತರುವುದಿಲ್ಲ. ಜಿಲ್ಲೆಯ ಸಂಸದರಾಗಿ ಜಿಲ್ಲೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿರುವುದು ಪ್ರಧಾನ ಮಂತ್ರಿಟಯವರ ಅಚ್ಛೇ ದಿನ್‌ಗಳ ಭರವಸೆಯಲ್ಲಿರುವ ಜಿಲ್ಲೆಯ ಜನತೆಗೆ ಯಾವ ಸಂದೇಶವನ್ನು ನೀಡುತ್ತದೆ ಎಂದು ಮಂಚ್ ವಿಷಾದ ವ್ಯಕ್ತಪಡಿಸಿದೆ.
ಹೇಳಿಕೆ ನೀಡಿರುವ ಸಂಸದ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಅಲಿ ಹಸನ್, ಗೌರವಾಧ್ಯಕ್ಷ ವಸಂತ ಟೈಲರ್, ಪ್ರಧಾನ ಕಾರ್ಯದರ್ಶಿ ರೋಶನ್ ಪತ್ರಾವೊ, ಮುಹಮ್ಮದ್ ಸಾಲಿ, ಪುರುಷೋತ್ತಮ ಮತ್ತಿತರರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಜನತಾದಳ ಖಂಡನೆ
ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ರ ಹೇಳಿಕೆಗೆ ದ.ಕ. ಜಿಲ್ಲಾ ಜೆಡಿಎಸ್ ಹಾಗೂ ಯುವ ಜೆಡಿಎಸ್ ಖಂಡನೆ ವ್ಯಕ್ತಪಡಿಸಿದೆ.
ಜನಪ್ರತಿನಿಧಿಯಾದವರು ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಬಿಕ್ಕಟ್ಟನ್ನು ಸೃಷ್ಟಿಸುವ ಕೆಲಸ ಮಾಡಬಾರದು. ಜವಾಬ್ದಾರಿ ಸ್ಥಾನದಲ್ಲಿರುವ ಸಂಸದರ ಬೇಜವಾಬ್ದಾರಿ ಹೇಳಿಕೆಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಹಾಗೂ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಖಂಡಿಸಿದ್ದಾರೆ.







