ಕಾಪು ಕ್ಷೇತ್ರದ ಕರಾವಳಿ ರಸ್ತೆ ದ್ವಿಪಥಕ್ಕೆ ಪ್ರಸ್ತಾವನೆ : ಶಾಸಕ ವಿನಯ ಕುಮಾರ್ ಸೊರಕೆ

ಪಡುಬಿದ್ರಿ, ಜ.2 : ಕಾಪು ಕ್ಷೇತ್ರದ ಕರಾವಳಿ ಪ್ರದೇಶದಲ್ಲಿನ ಮೀನುಗಾರಿಕಾ ರಸ್ತೆಯನ್ನು ದ್ವಿಪಥಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಹೆಜಮಾಡಿಯಿಂದ ಪಡುಬಿದ್ರಿಯನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಮುಟ್ಟಳಿವೆಗೆ ಸೇತುವೆ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರಾಹೆ 66ಕ್ಕೆ ಸಮಾನಾಂತರವಾಗಿ ಕರಾವಳಿಗೆ ಮತ್ತೊಂದು ರಸ್ತೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಕಳುಹಿಸಲಾದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಜಮಾಡಿ ಬಂದರು ಶೀಘ್ರ:
ಮಹತ್ವಾಕಾಂಕ್ಷೆಯ ಹೆಜಮಾಡಿ ಬಂದರು ಯೋಜನೆಯ ಎಲ್ಲಾ ಪರವಾನಗಿಗಳು ದೊರಕಿದ್ದು, ರಾಜ್ಯ ಸರಕಾರದ ಮೂಲಕ ಶೀಘ್ರ ಕೇಂದ್ರ ಸರಕಾರಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಬಂದರಿಗೆ ಪೂರಕವಾಗಿ ಕಾಪು ಕ್ಷೇತ್ರ ವ್ಯಾಪ್ತಿಯ ಮೀನುಗಾರಿಕಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಾಗುತ್ತಿದೆ. ಮುಖ್ಯಮಂತ್ರಿಗಳು ತಮ್ಮ ಪ್ರಥಮ ಬಜೆಟ್‌ನಲ್ಲಿಯೇ ಹೆಜಮಾಡಿ ಬಂದರು ಯೋಜನೆಗೆ ಅನುದಾನ ನಿಗದಿಪಡಿದ್ದಾರೆ. ಕೇಂದ್ರ ಅನುಮೋದನೆ ದೊರೆತ ತಕ್ಷಣ ಬಂದರು ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.
ಮುಟ್ಟಳಿವೆ ಸೇತುವೆ:
ಹೆಜಮಾಡಿಯಿಂದ ಪಡುಬಿದ್ರಿಗೆ ತೆರಳುವವರು ಮುಟ್ಟಳಿವೆ ಕಾರಣದಿಂದ ಹೆದ್ದಾರಿ ಮೂಲಕ ಸುತ್ತು ಬಳಸಿ ಹೋಗಬೇಕಿತ್ತು. ಈ ನಿಟ್ಟಿನಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯೊಂದಿಗೆ ಸಮಾಲೋಚಿಸಿ ಸೊರಕೆಯವರು ವಿನೂತನ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಿದ್ದರು. ಅದರಂತೆ ಇಲಾಖೆ ಬೆಂಗಳೂರಿನ ಸಿವಿಲೇಡ್ ಮೂಲಕ ನೀಲನಕ್ಷೆ ತಯಾರಿಸಿ 80 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಸೇತುವೆ ನರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಇಲಾಖಾ ಎಇಇ ಎಸ್. ನಾಗರಾಜ್‌ರವರು ವರ್ಷದೊಳಗೆ ಸೇತುವೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಎಡಿಬಿ ಯೋಜನೆಯಡಿ ಶಾಶ್ವತ ತಡೆಗೋಡೆ:
ಪಡುಕರೆ-ಉಳಿಯಾರಗೋಳಿ ಬಳಿ ಸಮುದ್ರದಂಚಿಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 99 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಳಿದೆ. ಇದೇ ರೀತಿ ಎರ್ಮಾಳು ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 89 ಕೋಟಿ ರೂ. ಮಂಜೂರಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು ಎಂದವರು ಹೇಳಿದರು.
ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪಿಡಿಒ ಮಮತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿಆರ್‌ಝಡ್ ವಿನಾಯತಿ:
ಕರಾವಳಿ ಭಾಗದಲ್ಲಿ ಸಿಆರ್‌ಝಡ್ ಮಿತಿ 500 ಮೀಟರ್ ಇರುವ ಕಾರಣ ಬಡ ಮೀನುಗಾರರಿಗೆ ದೊರೆಯಲು ತೀವ್ರ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಶೈಲೇಶ್ ಸಮಿತಿ ಮೂಲಕ ಕೇಂದ್ರ ಸರಕಾರಕ್ಕೆ 50 ಮೀಟರ್ ನಿಗದಿಪಡಿಸುವಂತೆ ಕೋರಿ ಮನವಿ ಮಾಡಲಾಗಿದೆ. ಅದು ಅನುಮೋದನೆ ಹಂತದಲ್ಲಿದ್ದು, ಪ್ರಧಾನಮಂತ್ರಿ ಸಹಿಗೆ ಬಾಕಿ ಇದೆ. ಅಲ್ಲದೆ ಹಲವು ಮೀನುಗಾರರಿಗೆ ಹಕ್ಕುಪತ್ರ ದೊರೆಯದೆ ಸಮಸ್ಯೆ ಉಂಟಾಗಿದೆ. ರಾಜ್ಯ ಕಂದಾಯ ಮತ್ತು ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ಸಮಾಲೋಚಿಸಿ 2006ನೇ ಇಸವಿಗಿಂತ ಮೊದಲು ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ. ದಾಖಲೆಪತ್ರ ಇಲ್ಲದಿದ್ದರೆ ಅಲ್ಲಿನ ತೆಂಗಿನ ಮರದ ಆಯುಸ್ಸು ನಿರ್ಧರಿಸಿ ಹಕ್ಕುಪತ್ರ ನೀಡಲಾಗುವುದು ಎಂದರು.







