ಮಂಜನಾಡಿ: ಚಾಲಕನಿಗೆ ಚೂರಿಯಿಂದ ಇರಿದು ಆರೋಪಿ ಪರಾರಿ
.jpg)
ಇರಿತಕ್ಕೊಳಗಾದ ಲಾರಿ ಚಾಲಕ ರಫೀಕ್
ಕೊಣಾಜೆ, ಜ.2 : ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿ ಗ್ರಾಮದ ಕಲ್ಕಟ್ಟ ಬಳಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊರ್ವ ಲಾರಿ ಚಾಲಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಲಾರಿ ಚಾಲಕ ಕೊಳ್ಳರಕೋಡಿಯ ರಫೀಕ್(38) ಎಂಬವರೇ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ಆರೋಪಿಯನ್ನು ಮದನಿನಗರದ ಹಂಝ(40) ಎಂದು ಗುರುತಿಸಲಾಗಿದ್ದು ಈತ ಚೂರಿಯಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ನೆತ್ತಿಲಕೋಡಿಯ ಲಾರಿ ಚಾಲಕರಾಗಿ ದುಡಿಯುತ್ತಿದ್ದ ರಫೀಕ್ ಅವರು ತೊಕ್ಕೊಟ್ಟುವಿನಿಂದ ಮಂಜನಾಡಿ ಕಡೆಗೆ ಸಾಗುತ್ತಿದ್ದಾಗ ಮಂಜನಾಡಿಯ ಕಲ್ಕಟ್ಟ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಹಂಝ ಲಾರಿಯಿಂದ ಧೂಳು ಹಬ್ಬುತ್ತಿದೆ ಎಂದು ಆರೋಪಿಸಿ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಅವ್ಯಾಚ್ಯವಾಗಿ ನಿಂದಿಸಿದ್ದ. ಇದನ್ನು ಚಾಲಕ ರಫೀಕ್ ಪ್ರಶ್ನಿಸಿದಾಗ ಆರೋಪಿ ರಫೀಕ್ ಹೊಟ್ಟೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಚೂರಿ ಇರಿತದಿಂದ ರಫೀಕ್ ಅವರ ಕಿಬ್ಬೊಟ್ಟೆಗೆ ಗಂಭೀರ ಗಾಯವಾಗಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಹಂಝನ ಈ ಮೊದಲೂ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.





