9/11ರ ಧೂಳು ಸೇವಿಸಿ ಹುಟ್ಟಿದ ಮಕ್ಕಳಲ್ಲಿ ಕಡಿಮೆ ತೂಕ : ಸಂಶೋಧನೆ

ನ್ಯೂಯಾರ್ಕ್, ಜ. 2: ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಯ ವೇಳೆ ಉತ್ಪತ್ತಿಯಾದ ಧೂಳು ಮಾಲಿನ್ಯದಿಂದಾಗಿ ಆ ಪ್ರದೇಶದ ಶಿಶುಗಳ ಅವಧಿಪೂರ್ವ ಪ್ರಸವವಾಯಿತು ಹಾಗೂ ಜನನದ ವೇಳೆ ಅವುಗಳ ತೂಕ ಕಡಿಮೆಯಾಗಿತ್ತು ಎಂದು ನೂತನ ಅಧ್ಯಯನವೊಂದು ಹೇಳಿದೆ. ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ಹೊಸದಿಲ್ಲಿಯಂಥ ನಗರಗಳ ಮಕ್ಕಳ ಮೇಲೂ ಅಧ್ಯಯನ ಪರಿಣಾಮ ಬೀರಬಹುದಾಗಿದೆ ಎಂದು ಪರಿಣತರು ಎಚ್ಚರಿಸುತ್ತಾರೆ.
2001 ಸೆಪ್ಟಂಬರ್ 11ರಂದು ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳು ಕುಸಿದಾಗ ಅಪಾಯಕಾರಿ ಸಂಯುಕ್ತಗಳನ್ನೊಳಗೊಂಡ ಧೂಮದ ಮೋಡ ಆ ಪ್ರದೇಶವನ್ನು ಆವರಿಸಿತು ಹಾಗೂ ಹಲವಾರು ದಿನಗಳ ಕಾಲ ಅದರ ಸಂಪರ್ಕಕ್ಕೆ ಬಂದ ಪ್ರತಿಯೊಂದು ಹಾಗೂ ಪ್ರತಿಯೊಬ್ಬರನ್ನೂ ಸ್ಪರ್ಶಿಸಿತು.
ಸ್ವಿಟ್ಸರ್‌ಲ್ಯಾಂಡ್‌ನ ಝೂರಿಕ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯಗಳ ಸಂಶೋಧಕರು 1994ರಿಂದ 2004ರವರೆಗಿನ ನ್ಯೂಯಾರ್ಕ್ ನಗರದ ಜನನ ದಾಖಲೆಗಳನ್ನು ಪರಿಶೀಲಿಸಿದರು.
12 ಲಕ್ಷ ಜನನಗಳ ಪೈಕಿ, ಲೋವರ್ ಮ್ಯಾನ್‌ಹಟನ್‌ನ ಉಪನಗರಗಳಲ್ಲಿ ವಾಸಿಸುತ್ತಿದ್ದ ಹಾಗೂ ಧೂಳಿಗೆ ಅತ್ಯಧಿಕ ಪ್ರಮಾಣದಲ್ಲಿ ತುತ್ತಾದ ಮಹಿಳೆಯರನ್ನು ಸಂಶೋಧಕರು ಪ್ರತ್ಯೇಕಿಸಿದರು.
9/11ರ ದಾಳಿಯ ವೇಳೆ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿದ್ದ ಮಹಿಳೆಯರು ಸಾಮಾನ್ಯ ಅಂಕಿಸಂಖ್ಯೆಯ ದುಪ್ಪಟ್ಟಿಗಿಂತಲೂ ಅಧಿಕ ಪ್ರಮಾಣದಲ್ಲಿ ಅವಧಿಪೂರ್ವ ಹೆರಿಗೆಗೆ ಒಳಗಾಗಿದ್ದರು.
ಕಡಿಮೆ ತೂಕ ಹೊಂದಿದ ಮಕ್ಕಳ ಸಂಖ್ಯೆಯಲ್ಲೂ ಹೆಚ್ಚಳವಾಗಿತ್ತು. ಇದು ಮುಂದೆ ಮಧುಮೇಹ, ಹೃದಯ ಮತ್ತು ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದಾಗಿದೆ.







