ಅಗ್ನಿ-4 ಯಶಸ್ವಿ ಪರೀಕ್ಷೆ: ಐದು ಪ್ರಮುಖ ಅಂಶಗಳು
.cms_.jpeg)
ಹೊಸದಿಲ್ಲಿ, ಜ.2: ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-4 ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಭಾರತ ದೂರಗಾಮಿ ಅಗ್ನಿ-5 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿದ ಒಂದು ವಾರದಲ್ಲೇ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಭಾರತ ಸಾಧಿಸಿದೆ.
ಒಡಿಶಾ ಕರಾವಳಿಯ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಇದೀಗ ಭಾರತವು ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಸರಣಿ, ಪೃಥ್ವಿ ಸರಣಿ ಹಾಗೂ ಸಬ್‌ಮೆರಿನ್‌ನಿಂದ ಉಡಾಯಿಸಬಹುದಾದ ಸಿಡಿತಲೆ ಕ್ಷಿಪಣಿಯನ್ನು ಹೊಂದಿದಂತಾಗಿದೆ.
ಅಗ್ನಿ-4 ಬಗೆಗಿನ ಐದು ಪ್ರಮುಖ ಅಂಶಗಳು ಇಲ್ಲಿವೆ
ಅಗ್ನಿ-4 ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಯಾಗಿದ್ದು, 4000 ಕಿಲೋಮೀಟರ್ ದೂರದ ಪ್ರದೇಶದ ಮೇಲೆ ದಾಳಿ ಮಾಡಲು ಶಕ್ತವಾಗಿದೆ. ಕಳೆದ ವಾರ ಪರೀಕ್ಷೆ ನಡೆಸಲಾದ ಅಗ್ನಿ-5 5,000 ಕಿಲೋಮೀಟರ್ ದೂರದವರೆಗೆ ದಾಳಿ ಮಾಡಲು ಶಕ್ತವಾಗಿದೆ. ಈ ಎರಡೂ ಕ್ಷಿಪಣಿಗಳು ಒಟ್ಟಾಗಿ ಇಡೀ ಚೀನಾದ ಪ್ರದೇಶಗಳ ಮೇಲೆ ದಾಳಿ ಮಾಡಲು ಶಕ್ಯವಾಗಿವೆ.
ಅಗ್ನಿ-4 ಕ್ಷಿಪಣಿಯು 20 ಮೀಟರ್ ಎತ್ತರವಿದ್ದು, 17 ಟನ್ ತೂಕ ಹೊಂದಿದೆ. ಮಧ್ಯಾಹ್ನ 12ರ ವೇಳೆಗೆ ವ್ಹೀಲರ್ ದ್ವೀಪದಿಂದ ಇದರ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
ಇದು ಅಗ್ನಿ-4 ಕ್ಷಿಪಣಿಯ ಆರನೇ ಪ್ರಯೋಗವಾಗಿದೆ. ಈ ಮುನ್ನ 20154 ನವೆಂಬರ್ 9ರಂದು ಪರೀಕ್ಷಿಸಲಾಗಿತ್ತು. ಇದು ತಡೆ ನಿರೋಧಕ ರಿಂಗ್ ಲೇಸರ್ ಗೈರೊಸ್ಕೋಪ್ ಪಥದರ್ಶಕ ವ್ಯವಸ್ಥೆಯನ್ನು ಹೊಂದಿದೆ. ಇದು 4000 ಡಿಗ್ರಿ ಸೆಂಟಿಗ್ರೇಡ್‌ವರೆಗಿನ ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇಂಥ ವಾತಾವರಣದಲ್ಲೂ ಇದರ ಆಂತರಿಕ ಉಷ್ಣಾಂಶ 50 ಡಿಗ್ರಿ ಆಸುಪಾಸಿನಲ್ಲೇ ಇರುತ್ತದೆ.
ಅಗ್ನಿ-4 ಕ್ಷಿಪಣಿಯು 5ನೆ ಪೀಳಿಗೆಯ ವಾಯುಯಾನ ಕಂಪ್ಯೂಟರ್ ಹಾಗೂ ವಿತರಣಾ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಹಾರಾಟದ ವೇಳೆ ಯಾವುದೇ ಅಡೆತಡೆಗಳು ಎದುರಾದಾಗ, ಸ್ವಯಂ ಆಗಿ ಮಾರ್ಗ ಬದಲಿಸಿಕೊಳ್ಳುವ ಗುಣವನ್ನು ಹೊಂದಿದೆ. ಇದು ಉನ್ನತ ಮಟ್ಟದ ವಿಶ್ವಾಸಾರ್ಹತೆಯನ್ನು ಹೊಂದಿದೆ.
ಅತ್ಯಂತ ನಿಖರವಾದ ರಿಂಗ್ ಲೇಸರ್ ಗೈರೊ ಆಧರಿತ ಆಂತರಿಕ ಪಥರ್ದಕ ವ್ಯವಸ್ಥೆಯನ್ನು ಇದು ಹೊಂದಿದ್ದು, ಇದಕ್ಕೆ ಪೂರಕವಾಗಿ ವಿಶ್ವಾಸಾರ್ಹ ರಿಡಂಡಂಟ್ ಮೈಕ್ರೊ ನೇವಿಗೇಶನ್ ವ್ಯವಸ್ಥೆಯನ್ನೂ ಹೊಂದಿದೆ. ಎರಡು ಅಂಕಿಯ ನಿಖರತೆಯನ್ನು ಇದು ಸಾಧಿಸಲು ಶಕ್ತವಾಗಿದೆ.







