ಪೇರೋಡ್ ಉಸ್ತಾದರ ಸಂದೇಶ ಯಾತ್ರೆ, ಸುನ್ನೀ ಸಂಗಮ

ಮೂಡುಬಿದಿರೆ , ಜ.2 : ’ಇಸ್ಲಾಂ ಅಲ್ಲಾಹುವಿನ ಧರ್ಮವಾಗಿದೆ. ನಿಮ್ಮ ಜೊತೆ ಸ್ನೇಹದಿಂದಿರುವ ಇತರ ಧರ್ಮೀಯ ಸಹೋದರರ ಜೊತೆಗೆ ನ್ಯಾಯ ಪಾಲಿಸುವಂತೆಯೂ ಇಸ್ಲಾಂ ನಿರ್ದೇಶನ ನೀಡಿದೆ. ಮುಸ್ಲಿಮರು ತಮ್ಮ ಶಕ್ತಿಗನುಗುಣವಾಗಿ ಅಶಕ್ತ ಇತರ ಧರ್ಮೀಯರಿಗೆ ಸಹಾಯದ ಹಸ್ತವನ್ನು ಚಾಚಬೇಕು. ಮುಸ್ಲಿಮರ ಮೇಲೆ ಅಕ್ರಮಣ ಮಾಡಿದವರ ಜೊತೆಯೂ ನ್ಯಾಯ ಪಾಲಿಸುವುದು ಧರ್ಮವಾಗಿದೆ. ಅನ್ಯಧರ್ಮೀಯರೊಂದಿಗೆ ಸ್ನೇಹಪರವಾಗಿ ವರ್ತಿಸಬೇಕು. ಸೌಹಾರ್ದಯುತವಾಗಿ ಬಾಳಬೇಕೆಂಬುದು ಇಸ್ಲಾಂ ಒತ್ತಿ ಹೇಳುತ್ತದೆ ಎಂದು ಮುಸ್ಲಿಂ ಧಾರ್ಮಿಕ ವಿದ್ವಾಂಸ , ಕೇರಳದ ಕುಟ್ಯಾಡಿ ಸಿರಾಜುಲ್ ಹುದಾ ಶಿಕ್ಷಣ ಸಮುಚ್ಚಯಗಳ ಸಂಸ್ಥಾಪಕ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ನುಡಿದರು.
ಅವರು ಸಿರಾಜುಲ್ ಹುದಾ ಸಿಲ್ವರ್ ಜೂಬಿಲಿ ಮಹಾಸಮ್ಮೇಳನದ ಪ್ರಚಾರಾರ್ಥವಾಗಿ ಕೈಗೊಂಡ ಕರ್ನಾಟಕದ ಸ್ನೇಹ ಸಂದೇಶ ಯಾತ್ರೆಯ ಅಂಗವಾಗಿ ಮೂಡುಬಿದಿರೆಯ ಸಮಾಜಮಂದಿರದ ಮರ್‌ಹೂಮ್ ಮಾರೂರು ಇಬ್ರಾಹಿಂ ಮುಸ್ಲಿಯಾರ್ ವೇದಿಕೆಯಲ್ಲಿ ಸೋಮವಾರ ನಡೆದ ಬೃಹತ್ ಸುನ್ನೀ ಸಂಗಮವನ್ನುದ್ದೇಶಿಸಿ ಮುಖ್ಯ ಪ್ರಭಾಷಣ ಮಾಡಿದರು.
ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಯಾರನ್ನೂ ಬಲವಂತಪಡಿಸಲು ಅವಕಾಶವಿಲ್ಲ. ಈ ಬಗ್ಗೆ ಖುರ್‌ಆನ್‌ನಲ್ಲಿ ಸಾಕಷ್ಟು ಪುರಾವೆಗಳಿವೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ತಮ್ಮ ಮನೆಯಲ್ಲಿ ಒಬ್ಬ ಯಹೂದಿ ಬಾಲಕನಿಗೆ ಆಶ್ರಯ ನೀಡಿದ್ದರು. ಆತನ ಅನಾರೋಗ್ಯ ಕಾಲದಲ್ಲಿ ಆತನಿಗಾಗಿ ಪ್ರಾರ್ಥಿಸಿದ್ದರು. ಇದು ನೈಜ ಇಸ್ಲಾಂ ಆಗಿದೆ’ ಎಂದವರು ಹೇಳಿದರು.
ಸಂದೇಶ ಭಾಷಣ ಮಾಡಿದ ಸಿರಾಜುಲ್ ಸಂದೇಶ ಯಾತ್ರೆ ಕರ್ನಾಟಕದ ಸ್ವಾಗತ ಸಮಿತಿ ಚೆಯರ್‌ಮೆನ್ ಎಮ್.ಎಸ್.ಎಮ್. ಅಬ್ದುಲ್ ರಶೀದ್ ಝೈನಿ ಕಾಮಿಲ್ ಮಾತನಾಡಿ ವಿವಿಧ ಪದವಿಗಳನ್ನು ಪ್ರದಾನಿಸುವ ದೇಶ ವಿದೇಶಗಳಲ್ಲಿ ಖ್ಯಾತಿವೆತ್ತ ಲೌಕಿಕ ವಿದ್ಯಾಸಂಸ್ಥೆಗಳು ಭಾರತದಲ್ಲಿ ಹೇರಳವಾಗಿದೆ. ಆದರೆ ಮನುಷ್ಯತ್ವದ ಪಾಠವನ್ನು ಕಲಿಸುವ ವಿದ್ಯಾಕೇಂದ್ರಗಳ ಕೊರತೆ ಇಂದಿಗೂ ಇದೆ. ಭಯೋತ್ಪಾದನೆಯಂತದ ದುಷ್ಕೃತ್ಯಗಳಲ್ಲಿ ಪಾಲ್ಗೊಂಡ ಮುಸಲ್ಮಾನ ಯುವಕರಲ್ಲಿ ಹೆಚ್ಚಿನವರು ಸ್ನಾತಕೋತ್ತರ ಪದವೀಧರರೂ, ಪಿಹೆಚ್‌ಡಿಗಳನ್ನು ಹೊಂದಿದವರಾಗಿದ್ದರು ಎಂಬುದು ಅಚ್ಚರಿಯ ಸಂಗತಿಯಾಗಿದೆ. ಮನುಷ್ಯತ್ವದ ಪಾಠವನ್ನು ಬೋಧಿಸುವಲ್ಲಿ ಆಧುನಿಕ ಶಿಕ್ಷಣ ವಿಫಲತೆಯನ್ನು ಕಂಡಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧ, ಹಿಂಸೆಗಳು ಇದಕ್ಕೆ ಸಾಕ್ಷಿಯಾಗಿದೆ. ಮಾನವತೆಯ ಉದಾತ್ತವಾದ ಸಂದೇಶ ಸಾರುವ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುವುದು ಇದೆಲ್ಲದಕ್ಕೂ ಪರಿಹಾರ’ ಎಂದು ಝೈನಿ ಹೇಳಿದರು
ಕರ್ನಾಟಕ ರಾಜ್ಯ ಕೆ.ಎಂ.ಜೆ.ಸಿ.ಯ ಪ್ರಧಾನ ಕಾರ್ಯದರ್ಶಿ ಹೆಚ್.ಐ. ಅಬೂಸುಫ್ಯಾನ್ ಇಬ್ರಾಹಿಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಯ್ಯಿದ್ ಜಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಸಂದೇಶ ಯಾತ್ರೆ ಸ್ವಾಗತ ಸಮಿತಿ ಕಾರ್ಯದರ್ಶಿ ಎಂ.ಪಿ ಅಶ್ರಫ್ ಸಅದಿ ಮಲ್ಲೂರು, ಹೆಚ್.ಐ ಮುಹಮ್ಮದ್ ಮುಸ್ಲಿ0ಾರ್ ಹಂಡೇಲ್, ಅಲ್‌ಹಾಜಿ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ, ಸಿ,ಹೆಚ್ ಮಹ್ಮದ್ ಸಖಾಫಿ, ಹಾಜಿ ಮುಹಮ್ಮದ್ ಗಂಟಾಲ್‌ಕಟ್ಟೆ, ಇಸ್ಮಾಯಿಲ್ ಸಅದಿ ಕಿನ್ಯ, ಶರೀಫ್ ಸಅದಿ ಕಿಲ್ಲೂರು, ನಝೀರ್ ಕಾಶಿಪಟ್ಣ, ಸಖಾಫಿ ಅಮ್ಮುಂಜೆ, ಇಬ್ರಾಹಿಂ ಸಅದಿ ಮೂಡುಬಿದಿರೆ, ಹಾಫಿಳ್ ಹೆಚ್.ಐ ಸುಫಿಯಾನ್ ಸಖಾಫಿ, ಬಿ.ಹೆಚ್ ಅಬ್ದುಲ್ ಜಲೀಲ್ ಸಖಾಫಿ ಹೊಸ್ಮಾರು, ಸಿರಾಜುದ್ದೀನ್ ಸಖಾಫಿ ತೋಡಾರು, ನೌಫಲ್ ರಿಯಾಝ್ ಅಹ್‌ಸನಿ ಸಾಣೂರು ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಸ್ಸಲಾಂ ಮದನಿ ಮಾರ್ನಾಡು ಅವರ ದುಆದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶರೀಫ್ ಸಅದಿ ಕಿಲ್ಲೂರು ಸ್ವಾಗತಿಸಿದರು. ಹುಸೈನ್ ಮುಈನಿ ಮಾರ್ನಾಡ್ ಧನ್ಯವಾದವಿತ್ತರು.







