ಭಾರತದ ಮಹಿಳಾ ತಂಡ ಫೈನಲ್‌ಗೆ
ಸ್ಯಾಫ್ ವನಿತೆಯರ ಫುಟ್ಬಾಲ್ ಟೂರ್ನಿ

ಸಿಲಿಗುರಿ,ಜ.2: ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಮಹಿಳಾ ಫುಟ್ಬಾಲ್ ತಂಡ ನೇಪಾಳವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಸ್ಯಾಫ್ ವನಿತೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದೆ.
ಸೋಮವಾರ ಇಲ್ಲಿನ ಕಾಂಚನ್‌ಜುಂಗ ಸ್ಟೇಡಿಯಂನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಪರ ಕಮಲಾದೇವಿ(45ನೆ ನಿಮಿಷ),ಇಂದುಮತಿ(58ನೆ ನಿಮಿಷ) ಹಾಗೂ ಸಸ್ಮಿತಾ ಮಲಿಕ್(83ನೆ ನಿ.) ತಲಾ ಒಂದು ಗೋಲು ಬಾರಿಸಿದರು. ನೇಪಾಳದ ಪರ ಸಬಿತ್ರಾ ಭಂಡಾರಿ 75ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದ್ದರು.
ಮೊದಲಾರ್ಧದಲ್ಲಿ ಭಾರತ ಪ್ರಾಬಲ್ಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಂದ್ಯ ಏಕಪಕ್ಷೀಯವಾಗಿ ಸಾಗಿತು. ಕಮಲಾದೇವಿ 45ನೆ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು.
ದ್ವಿತೀಯಾರ್ಧದ 58ನೆ ನಿಮಿಷದಲ್ಲಿ ಗೋಲು ಬಾರಿಸಿದ ಇಂದುಮತಿ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು. 75ನೆ ನಿಮಿಷದಲ್ಲಿ ನೇಪಾಳದ ಪರ ಸಬಿತ್ರಾ ಸಮಾಧಾನಕರ ಗೋಲು ಬಾರಿಸಿದರು.
ಭಾರತದ 3ನೆ ಹಾಗೂ ಕೊನೆಯ ಗೋಲು 83ನೆ ನಿಮಿಷದಲ್ಲಿ ದಾಖಲಾಯಿತು. ನೇಪಾಳದ ಗೋಲ್‌ಕೀಪರ್ ಅಂಜಿಲಾ ಉತ್ತಮ ಪ್ರದರ್ಶನದಿಂದ ಗಮನಸೆಳೆದರು.
ಭಾರತದ ಕೋಚ್ ಸಾಜಿದ್ ದರ್ ಈ ಗೆಲುವನ್ನು ಸಾಂಘಿಕ ಪ್ರಯತ್ನ ಎಂದು ಬಣ್ಣಿಸಿದ್ದಾರೆ.
ಫೈನಲ್‌ಗ ತಲುಪಿದ ತಂಡದ ಯಶಸ್ಸಿನಲ್ಲಿ ಪ್ರತಿ ಆಟಗಾರ್ತಿಯರ ಕೊಡುಗೆ ಇದೆ. ಗೋಲ್‌ಕೀಪರ್‌ನಿಂದ ಡಿಫೆಂಡರ್‌ಗಳು,ಮಿಡ್‌ಫೀಲ್ಡರ್‌ಗಳಿಂದ ಸ್ಟ್ರೈಕರ್‌ಗಳ ತನಕ ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಇದೊಂದು ಸಾಂಘಿಕ ಪ್ರಯತ್ನ ಎಂದು ಪಂದ್ಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ದರ್ ತಿಳಿಸಿದ್ದಾರೆ.







