ಗುಜರಾತ್-ಜಾರ್ಖಂಡ್ ಸಮಬಲ
ರಣಜಿ ಟ್ರೋಫಿಯ ಎರಡನೆ ಸೆಮಿಫೈನಲ್:

ನಾಗ್ಪುರ, ಜ.2: ವೇಗದ ಬೌಲರ್ ಆರ್‌ಪಿ ಸಿಂಗ್ ದಿನದಾಟದಂತ್ಯಕ್ಕೆ ಅಪಾಯಕಾರಿ ಬ್ಯಾಟ್ಸ್‌ಮನ್ ಇಶಾನ್ ಕಿಶನ್(61 ರನ್) ವಿಕೆಟ್ ಪಡೆಯುವ ಮೂಲಕ ಗುಜರಾತ್ ತಂಡ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ಎರಡನೆ ಸೆಮಿಫೈನಲ್‌ನಲ್ಲಿ ಮೇಲುಗೈ ಸಾಧಿಸುವ ಸೂಚನೆ ನೀಡಿದೆ.
2ನೆ ದಿನವಾದ ಸೋಮವಾರ 3 ವಿಕೆಟ್ ನಷ್ಟಕ್ಕೆ 283 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಗುಜರಾತ್ ತಂಡ ಕೆಳ-ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ನಿರಂತರವಾಗಿ ವಿಕೆಟ್ ಕಳೆದುಕೊಂಡು 390 ರನ್‌ಗೆ ಆಲೌಟಾಯಿತು.
ಅಜೇಯ 144 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಪ್ರಿಯಾಂಕ್ ಪಾಂಚಾಲ್ ನಿನ್ನೆಯ ಮೊತ್ತಕ್ಕೆ ಕೇವಲ 5 ರನ್ ಸೇರಿಸಿ ಔಟಾದರು. ಮನ್‌ಪ್ರೀತ್ ಜುನೇಜ(22) ಕೂಡ ಬೇಗನೆ ಔಟಾದರು. ಆಗ ಗುಜರಾತ್ 299 ರನ್‌ಗೆ 5 ವಿಕೆಟ್ ಕಳೆದುಕೊಂಡಿತು.
ರಾಹುಲ್ ಭಟ್ಟಿ ಹಾಗೂ ಚಿರಾಗ್ ಗಾಂಧಿ ಉಪಯುಕ್ತ ರನ್ ಗಳಿಸಿದರು. ಆದರೆ,ಈ ಇಬ್ಬರು ಬೆನ್ನುಬೆನ್ನಿಗೆ ಔಟಾದರು. ಭಟ್ಟಿ ಅವರೊಂದಿಗೆ ಕೈಜೋಡಿಸಿದ ಆರ್.ಪಿ. ಸಿಂಗ್(40 ರನ್,69 ಎಸೆತ, 5 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್‌ನ ಮೂಲಕ 8ನೆ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದರು. ರಾಹುಲ್ ಶುಕ್ಲಾ(3-71) 8 ಎಸೆತಗಳಲ್ಲಿ ಗುಜರಾತ್‌ನ ಕೊನೆಯ 3 ವಿಕೆಟ್‌ಗಳನ್ನು ಉರುಳಿಸಿ 390 ರನ್‌ಗೆ ನಿಯಂತ್ರಿಸಿದರು.
ಗುಜರಾತ್‌ಗೆ ಉತ್ತರವಾಗಿ ಜಾರ್ಖಂಡ್ ಕಳಪೆ ಆರಂಭ ಪಡೆಯಿತು. ಆರಂಭಿಕ ಸುಮಿತ್ ಕುಮಾರ್ ವೇಗಿ ಆರ್‌ಪಿ ಸಿಂಗ್ ಎಸೆದ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಔಟಾದರು. 2ನೆ ವಿಕೆಟ್‌ಗೆ 45 ರನ್ ಸೇರಿಸಿದ ಪ್ರತ್ಯುಶ್ ಸಿಂಗ್ ಹಾಗೂ ವಿರಾಟ್ ಸಿಂಗ್ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ಆರ್‌ಪಿ ಸಿಂಗ್ ಮತ್ತೊಮ್ಮೆ ಬೇರ್ಪಡಿಸಿದರು.
ವಿರಾಟ್ ಸಿಂಗ್ ಹಾಗೂ ಸೌರಭ್ ತಿವಾರಿ(39) ಉತ್ತಮ ಆರಂಭವನ್ನು ಪಡೆದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಈ ಇಬ್ಬರು ಔಟಾದಾಗ ಜಾರ್ಖಂಡ್ 4ಕ್ಕೆ 121 ರನ್ ಗಳಿಸಿತ್ತು.
ಇಶಾಂಕ್ ಜಗ್ಗಿ(ಅಜೇಯ 40) ಹಾಗೂ ಕಿಶನ್(61 ರನ್, 59 ಎಸೆತ, 9 ಬೌಂಡರಿ, 3 ಸಿಕ್ಸರ್) ಕೇವಲ 106 ಎಸೆತಗಳಲ್ಲಿ 92 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಆರ್‌ಪಿ ಸಿಂಗ್ ಬೇರ್ಪಡಿಸಲು ಯಶಸ್ವಿಯಾದರು.
ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿರುವ ಜಾರ್ಖಂಡ್ ತಂಡ ಗುಜರಾತ್ ಸ್ಕೋರ್‌ಗಿಂತ 176 ರನ್ ಹಿನ್ನಡೆಯಲ್ಲಿದೆ. ಒಂದು ವೇಳೆ ಗುಜರಾತ್ 50ಕ್ಕೂ ಅಧಿಕ ರನ್ ಮುನ್ನಡೆ ಪಡೆದರೆ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಮೊದಲ ಇನಿಂಗ್ಸ್: 390
(ಪ್ರಿಯಾಂಕ್ ಪಾಂಚಾಲ್ 149, ಪಾರ್ಥಿವ್ ಪಟೇಲ್ 62, ಅಜಯ್ ಯಾದವ್ 3-67, ರಾಹುಲ್ ಶುಕ್ಲಾ 3-71)
ಜಾರ್ಖಂಡ್ 214/5(ಇಶಾನ್ ಕಿಶನ್ 61, ಇಶಾಂಕ್ ಜಗ್ಗಿ ಅಜೇಯ 40, ಆರ್‌ಪಿ ಸಿಂಗ್ 3-48)
ಮುಂಬೈ 171/4, ತಮಿಳುನಾಡು 305
ರಾಜ್‌ಕೋಟ್, ಜ.2: ರಣಜಿ ಟ್ರೋಫಿಯ ಮೊದಲ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ತಮಿಳುನಾಡಿನ ಮೊದಲ ಇನಿಂಗ್ಸ್ 305 ರನ್‌ಗೆ ಉತ್ತರವಾಗಿ ಎರಡನೆ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದೆ.
ಟೀ ವಿರಾಮದ ಬಳಿಕ 3 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಮುಂಬೈ ದಿಢೀರ್ ಕುಸಿತ ಕಂಡಿತು.
ಸೂರ್ಯಕುಮಾರ್ ಯಾದವ್(73 ರನ್, 116 ಎಸೆತ, 11 ಬೌಂಡರಿ) ಹಾಗೂ ಪ್ರಫುಲ್ ವಘಾಲೆ(48 ರನ್) 2ನೆ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು. ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಮುಂಬೈ ಈ ಮೊತ್ತಕ್ಕೆ 3 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 43 ರನ್ ಸೇರಿಸಿದ ವಿಕೆಟ್‌ಕೀಪರ್ ಆದಿತ್ಯ ತಾರೆ ಹಾಗೂ ಶ್ರೇಯಸ್ ಐಯ್ಯರ್(ಅಜೇಯ 24) ತಂಡಕ್ಕೆ ಆಸರೆಯಾದರು.
ಇದಕ್ಕೆ ಮೊದಲು 6 ವಿಕೆಟ್ ನಷ್ಟಕ್ಕೆ 261 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ತಮಿಳುನಾಡು 305 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
41 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಶಂಕರ್ 50 ರನ್ ಗಳಿಸಿದ ತಕ್ಷಣ ಔಟಾದರು. ಅಶ್ವಿನ್ ಕ್ರಿಸ್ಟ್ 31 ರನ್ ಗಳಿಸಿದರು. ಈ ಜೋಡಿ 7ನೆ ವಿಕೆಟ್‌ಗೆ 49 ರನ್ ಸೇರಿಸಿತು. ಈ ಇಬ್ಬರು ಔಟಾದ ಬಳಿಕ ಶ್ರೀನಿವಾಸ್ ಹಾಗೂ ವ್ನಿೇಶ್ ಪೆವಿಲಿಯನ್‌ಗೆ ಸೇರಿದರು.
ಮುಂಬೈನ ಪರವಾಗಿ ಶಾರ್ದೂಲ್ ಠಾಕೂರ್(4-75) ಹಾಗೂ ಅಭಿಷೇಕ್ ನಾಯರ್(4-66) ತಲಾ 4 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು ಪ್ರಥಮ ಇನಿಂಗ್ಸ್: 305 ರನ್‌ಗೆ ಆಲೌಟ್
(ಇಂದ್ರಜಿತ್ 64, ಗಾಂಧಿ 50, ಶಂಕರ್ 50, ಮುಕುಂದ್ 38, ಠಾಕೂರ್ 4-75, ನಾಯರ್ 4-66)
ಮುಂಬೈ ಪ್ರಥಮ ಇನಿಂಗ್ಸ್: 171/4
(ಸೂರ್ಯಕುಮಾರ್ ಯಾದವ್ 73, ವೇಲಾ 48, ಐಯ್ಯರ್ ಅಜೇಯ 24, ಕ್ರಿಸ್ಟ್ 1-48)







