ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ತೀರ್ಪು: ಬೇಡಿ

ಹೊಸದಿಲ್ಲಿ, ಜ.2: "ಭಾರತೀಯ ಕ್ರಿಕೆಟ್ ಒಳಿತಿಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮುಖ್ಯವಾಗಿದ್ದು, ಇದೊಂದು ಮಹತ್ವದ ತೀರ್ಪು. ಇದೀಗ ನಿರೀಕ್ಷೆಯ ಬೆಳಕು ಕಾಣಿಸಿಕೊಂಡಿದ್ದು, ಸುಪ್ರೀಂಕೋರ್ಟ್‌ಗೆ ನಾವು ಕೃತಜ್ಞತೆ ಸಲ್ಲಿಸಬೇಕಾಗಿದೆ. ಈ ಸುದ್ದಿ ಭಾರತೀಯ ಕ್ರೀಡೆಗೆ ಅದರಲ್ಲೂ ಮುಖ್ಯವಾಗಿ ಕ್ರಿಕೆಟ್‌ಗೆ ಉತ್ತಮ ಸುದ್ದಿ'' ಎಂದು ಭಾರತದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.
ಲೋಧಾ ಸಮಿತಿಯಒಂದು ರಾಜ್ಯ, ಒಂದು ಮತ ಶಿಫಾರಸ್ಸನ್ನು ಬಿಸಿಸಿಐ ತೀವ್ರ ವಿರೋಧಿಸಿತ್ತು. ಮುಂಬೈ ಕ್ರಿಕೆಟ್ ಸಂಸ್ಥೆ ಈ ಶಿಫಾರಸಿಗೆ ಹೆಚ್ಚು ವಿರೋಧ ವ್ಯಕ್ತಪಡಿಸಿತ್ತು. ಒಂದು ರಾಜ್ಯ, ಒಂದು ಮತ ಜಾರಿಗೆ ಬಂದರೆ ಮಹಾರಾಷ್ಟ್ರದಲ್ಲಿ ಮುಂಬೈ, ಮಹಾರಾಷ್ಟ್ರ ಹಾಗೂ ವಿದರ್ಭ ರೊಟೇಶನ್ ಆಧಾರದಲ್ಲಿ ಮತ ಚಲಾಯಿಸಬೇಕಾಗುತ್ತದೆ.
"ಇದು ಮುಂಬೈ ಕ್ರಿಕೆಟ್‌ಗೆ ಬೇಸರದ ವಿಷಯ. ಮುಂಬೈ ಕ್ರಿಕೆಟ್ ಬಹಳಷ್ಟು ಅಂತಾರಾಷ್ಟ್ರೀಯ ಸ್ಟಾರ್‌ಗಳನ್ನು ಭಾರತ ತಂಡಕ್ಕೆ ನೀಡಿದೆ. 41 ಬಾರಿ ರಣಜಿ ಟ್ರೋಫಿ ಜಯಿಸಿ ಹೊಸ ದಾಖಲೆ ಬರೆದಿದೆ. ಮುಂಬೈಯನ್ನು ಮತದಿಂದ ಹೊರಗಿಡುವುದು ನೋವಿನ ವಿಷಯ'' ಎಂದು ಎಂಸಿಎ ಮಾಜಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರದೆ ಬೇರೆ ಆಯ್ಕೆಯೇ ಇಲ್ಲ. ಸುಪ್ರೀಂಕೋರ್ಟ್ ಹೇಳಿದ್ದೆಲ್ಲವೂ ಅಂತಿಮ. ನಾವು ನ್ಯಾಯಾಲಯದ ತೀರ್ಪಿಗೆ ಗೌರವ ನೀಡಬೇಕು ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ನಿರಂಜನ್ ಷಾ ಹೇಳಿದ್ದಾರೆ.
"ನಾವು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇವೆ. ಈ ಬಗ್ಗೆ ನೀಲಿನಕ್ಷೆ ರೂಪಿಸಲು ವಿಶೇಷ ಸಾಮಾನ್ಯ ಸಭೆಯನ್ನು ಶೀಘ್ರವೇ ಕರೆಯಲಿದ್ದೇವೆ'' ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
"ನಾವು ಸುಪ್ರೀಂಕೋರ್ಟ್ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಆದೇಶವನ್ನು ಓದುವವರೆಗೆ ಏನನ್ನೂ ಹೇಳಲಾರೆ. ಆದೇಶವನ್ನು ಓದಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ' ಎಂದು ಕರ್ನಾಟಕದ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದರು.
ಆಂಧ್ರ ಕ್ರಿಕೆಟ್ ಸಂಸ್ಥೆಯು ಆದಷ್ಟು ಬೇಗನೆ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಿದೆ ಎಂದು ಹೇಳಿರುವ ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಗೋಕರಾಜು ಗಂಗಾರಾಜು ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಏನೂ ಗೊಂದಲವಿಲ್ಲ.ಆಂಧ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ತಕ್ಷಣವೇ ಜಾರಿಗೆ ಬರುವಂತೆ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಿದ್ದಾರೆ.







