ಕಾನೂನಿಗಿಂತ ಯಾರೂ ದೊಡ್ಡವರಲ್ಲ: ನ್ಯಾ.ಲೋಧಾ

ಹೊಸದಿಲ್ಲಿ,ಜ.2: ಆಡಳಿತಗಾರರು ಇಂದು ಬರುತ್ತಾರೆ, ನಾಳೆ ಹೋಗುತ್ತಾರೆ. ಆದರೆ, ಕ್ರೀಡೆ ಶಾಶ್ವತ. ಸುಪ್ರೀಂಕೋರ್ಟ್‌ನ ಇಂದಿನ ತೀರ್ಪು ಕ್ರೀಡೆಗೆ ಸಂದ ಜಯ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ನ್ಯಾಯಮೂರ್ತಿ ಆರ್.ಎಂ. ಲೋಧಾ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐ ಆಡಳಿತದಲ್ಲಿ ಪಾರದರ್ಶಕತೆ ತರುವ ಸಂಬಂಧ ಲೋಧಾ ಸಮಿತಿ ಮೂರು ವರದಿಗಳನ್ನು ನೀಡಿತ್ತು. ಆ ಮೂರೂ ವರದಿಗಳನ್ನು ಬಿಸಿಸಿಐ ಅನುಷ್ಠಾನಗೊಳಿಸಲಿಲ್ಲ. ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಡಿ.3ರ ತನಕ ನ್ಯಾಯಾಲಯ ಕಾಲಾವಕಾಶ ನೀಡಿತ್ತು. ಲೋಧಾ ಸಮಿತಿಯ ಎಲ್ಲ ಶಿಫಾರಸು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ವಾದಿಸಿತ್ತು. ಒಮ್ಮೆ ಸುಪ್ರೀಂಕೋರ್ಟ್ ಆದೇಶ ಬಂದರೆ ಪಾಲಿಸಬೇಕು. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಅನುರಾಗ್ ಠಾಕೂರ್ ವಜಾ ಆಗಲೇಬೇಕಿತ್ತು. ಇಂದು ಆಗಿದ್ದಾರೆ ಎಂದು ಜಸ್ಟಿಸ್ ಲೋಧಾ ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದರು.
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಠಾಕೂರ್ ಶುಭಾಶಯ
ಹೊಸದಿಲ್ಲಿ, ಡಿ.2: ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಬಿಸಿಸಿಐ ಆಡಳಿತ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಯೋಚಿಸಿದ್ದರೆ ನಾನು ಅವರಿಗೆ ಶುಭಾಶಯ ಕೋರುವೆ ಎಂದು ಸುಪ್ರೀಂಕೋರ್ಟ್‌ನಿಂದ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲ್ಪಟ್ಟಿರುವ ಅನುರಾಗ್ ಠಾಕೂರ್ ಹೇಳಿದ್ದಾರೆ.
ದೇಶದ ಎಲ್ಲ ಪ್ರಜೆಯಂತೆ ನಾನು ಕೂಡ ಸುಪ್ರೀಂಕೋರ್ಟ್‌ನ ತೀರ್ಪಿಗೆ ಗೌರವ ನೀಡುವೆ. ನನಗಿದು ವೈಯಕ್ತಿಕ ಹೋರಾಟವಲ್ಲ. ಕ್ರಿಕೆಟ್ ಮಂಡಳಿಯ ಸ್ವಾಯತ್ತತೆಯ ಹೋರಾಟವಾಗಿದೆ ಎಂದು ಒಂದು ನಿಮಿಷದ ವೀಡಿಯೊದಲ್ಲಿ ಠಾಕೂರ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಉತ್ತಮ ಆಡಳಿತಾಧಿಕಾರಿಗಳಿಂದ ಉತ್ತಮ ಅಭಿವೃದ್ದಿ ಕಾರ್ಯಗಳು ನಡೆದಿವೆ. ಬಿಸಿಸಿಐ ಶ್ರೇಷ್ಠ ಕ್ರೀಡಾ ಸಂಸ್ಥೆಯಾಗಿದೆ. ಭಾರತದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ನೆರವಿನಿಂದ ಉತ್ತಮ ಕ್ರಿಕೆಟ್ ಮೂಲಭೂತ ಸೌಕರ್ಯವನ್ನು ಹೊಂದಿದೆ. ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಡುವ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ಮತ್ತಷ್ಟು ಬೆಳೆಯಲಿದೆ ಎಂದು ಠಾಕೂರ್ ವಿಶ್ವಾಸ ವ್ಯಕ್ತಪಡಿಸಿದರು.







