ನೆತ್ತಿಚೌಕ ಅರಣ್ಯದಲ್ಲಿ ಕಡವೆಗಳ ಬೆೇಟೆ ಮಾಲು ಸಹಿತ 11 ಆರೋಪಿಗಳ ಬಂಧನ

ತರೀಕೆರೆ, ಜ.2: ಸಮೀಪದ ಕೆಮ್ಮಣ್ಣಗುಂಡಿ ಮತ್ತು ರಾಜ್‌ಮಹಲ್ ಮಾರ್ಗದ ಮಧ್ಯೆ ಇರುವ ನೆತ್ತಿಚೌಕ ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ ಎರಡು ಕಡವೆಗಳನ್ನು ಬೆೇಟೆಯಾಡಿದ 11 ಮಂದಿ ಆರೋಪಿಗಳನ್ನು ತಣಿಗೆಬೈಲು ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಪರಾರಿಯಾಗಿರುವ ಇನ್ನೊರ್ವ ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.
ಶನಿವಾರ ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಕಡವೆಗಳನ್ನು ಭೇಟೆಯಾಡಿ ಒಂದರ ಚರ್ಮ ಸುಲಿದು ಇನ್ನೊಂದನ್ನು ಹಾಗೆಯೇ ವಾಹನಗಳಲ್ಲಿ ಸಾಗಿಸುತ್ತಿರುವ ಖಚಿತ ವರ್ತಮಾನ ತಿಳಿದ ವನ್ಯಜೀವಿ ವಿಭಾಗದ ಅಧಿಕಾರಿಗಳು ರವಿವಾರ ಬೆಳಗ್ಗೆ 4:30ಕ್ಕೆ ಕೆಮ್ಮಣ್ಣಗುಂಡಿ ಬಳಿಯ ಅರಣ್ಯ ತನಿಖಾ ಠಾಣೆ ಬಳಿ 11ಮಂದಿ ಆರೋಪಿಗಳನ್ನು ಬಂಧಿಸಿ ಮಾಲು ಸಮೇತ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಇನ್ಫೊಸಿಸ್ ಇಂಜಿನಿಯರ್ ಮೀರ್ ನಾಯರ್ ಅಲಿ, ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಮೀರ್ ನಝೀರ್ ಅಲಿ, ಗ್ಲೋಬಲ್ ಸೊಲ್ಯೂಷನ್‌ನ ಇಂಜಿನಿಯರ್ ಸೈಯದ್ ಆಮಿರ್, ಸಕಲೇಶಪುರ ನಿವಾಸಿ ಅಕ್ತರ್ ಅಹ್ಮದ್, ಕರ್ನಾಟಕ ರೈಫಲ್ ಅಸೋಸಿಯೇಶನ್‌ನ ಸದಸ್ಯ ಮುಹಮ್ಮದ್ ಸಮೀರ್, ಮುಝಾಫಿರ್, ಸೋಮಾವಾರಪೇಟೆ ನಿವಾಸಿ ಮುಹಮ್ಮದ್ ರಿಝ್ವೋನ್ , ಚಿಕ್ಕಮಗಳೂರು ಜಿಲ್ಲೆ ಅತ್ತಿಗುಂಡಿ ಮಹಲ್ ಗ್ರಾಮದ ವಾಸಿಗಾದ ಅರುಣ್, ಪ್ರಸನ್ನ, ಹರೀಶ್ ಮತ್ತು ಚೇತನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಮತ್ತೋರ್ವ ಆರೋಪಿ ರಿಯಲ್ ಎಸ್ಟೇಟ್ ಉದ್ಯಮಿ ರಫೀಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಕಾರ್ಯಾಚರಣೆಯ ನೇತೃತ್ವವನ್ನು ತಣಿಗೆಬೈಲು ವನ್ಯಜೀವಿ ವಿಭಾಗದ ಆರ್.ಎಫ್.ಒ ಎಂ. ಉಲ್ಲಾಸ್, ಉಪವಲಯ ಅರಣ್ಯಾಧಿಕಾರಿಗಳಾದ ಸೂರಪ್ಪ, ಅರಣ್ಯ ರಕ್ಷಕ ಸದ್ದಾಂ ಹುಸೈನ್, ಸಂದೀಪ್, ಬಸವರಾಜ್, ನಂದೀಶ್, ವಸಂತ, ಪ್ರತಾಪ್ ವಹಿಸಿದ್ದರು.







