ಅಂಚೆ ಸಿಬ್ಬಂದಿಯಿಂದ ವೃದ್ಧೆಯ ವಿಧವಾ ವೇತನ ತಡೆ: ಆರೋಪ
ಕಾರವಾರ, ಜ.2: ಅಂಚೆ ಸಿಬ್ಬಂದಿಯೊಬ್ಬರು ತಮ್ಮ ಮೇಲಿನ ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು ಸರಕಾರದಿಂದ ಸಿಗುವ ಸೌಲಭ್ಯಗಳು ರದ್ದುಗೊಳ್ಳುವಂತೆ ಮಾಡಿದು,್ದ ಸೂಕ್ತ ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದು ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ವೃದ್ಧೆ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ನೀಡಿದ ಸುಮಾ ಅಂಬಿಗ ಎಂಬ 82ವರ್ಷದ ವೃದ್ಧೆಯು, ತನಗೆ 25 ವರ್ಷಗಳಿಂದ ಹಾಗೂ ತಮ್ಮ ಸೊಸೆ ದೇವಿ ಅಂಬಿಗ ಇವಳಿಗೂ 20 ವರ್ಷಗಳಿಂದ ವಿಧವಾ ವೇತನ ಬರುತಿತ್ತು.ಊರಿನ ಅಂಚೆ ಸಿಬ್ಬಂದಿಯಾದ ಜಗದೀಶ ಗೌಡ ಸರಕಾರಿ ಜಮೀನಿನನ್ನು ಕಬಳಿಸಿರುವ ಕುರಿತು ತಾವು ದೂರು ನೀಡಿದ್ದರಿಂದ ನಮ್ಮ ಮೇಲೆ ಅಂಚೆ ಸಿಬ್ಬಂದಿ ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಗೆ ಬರುತ್ತಿದ್ದ ವಿಧವಾ ವೇತನವನ್ನು ಸುಳ್ಳು ನೆಪ ಹೇಳಿ ಸರಕಾರಕ್ಕೆ ವಾಪಸ್ ಕಳುಹಿಸುವ ಮೂಲಕ ಅದನ್ನು ರದ್ದುಗೊಳ್ಳುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಸುಮಾ, ತಮ್ಮ ಮನೆಗೆ ಬರುವ ಅಂಚೆ ಪತ್ರಗಳನ್ನು ಸಹ ಮನೆಗೆ ಕಳುಹಿಸುವುದಿಲ್ಲ.ಇದರ ಬಗ್ಗೆ ವಿಚಾರಿಸಿದರೆ ರಾಕ್ಷಸರಂತೆ ವರ್ತಿಸಿ ನೀವು ಬೇಕಾದರೆ ಬೇರೆ ಅಂಚೆ ಇಲಾಖೆಯಲ್ಲಿ ತೆಗೆದುಕೊಳ್ಳಿ ಎಂದು ಉತ್ತರ ನೀಡುತ್ತಾರೆ. ಸರಕಾರಿ ಜಮೀನು ವಶ ಪಡಿಸಿಕೊಂಡ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿದಾಗ ಪೇದೆಯೊಬ್ಬರು ಬಂದು ಎಲ್ಲ ಸರಿ ಮಾಡಿಕೊಡುತ್ತೇನೆ ಎಂದು ಹೆಬ್ಬೆಟ್ಟು ಗುರುತು ಪಡೆದು ಹೋಗಿದ್ದರು.ಆದರೆ ಈಗ ನಮ್ಮ ವಿಧವಾ ವೇತನ ರದ್ದಾಗಿರುವ ಮಾಹಿತಿ ಸಿಕ್ಕಿದೆ ಎಂದು ತಮ್ಮ ಅಳಲು ತೊಡಿಕೊಂಡರು.
ಪೋಲಿಸರಿಗೆ ದೂರು ಸಲ್ಲಿಸಿದ ನಂತರ ರಸ್ತೆಯಲ್ಲಿ ಓಡಾಡುವಾಗ ಜಗದೀಶ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಮತ್ತೊಮ್ಮೆ ದೂರು ನೀಡಿದರೆ ಹೇಗೆ ಬಿಡಿಸಿಕೊಂಡು ಬರಬೇಕೆಂದು ತನಗೆ ಗೊತ್ತಿದೆ ಎಂದು ಹೀಯಾಳಿಸುತ್ತಾರೆ ಹಾಗೂ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಆದ್ದರಿಂದ ತಮಗೆ ಮನೆಯಲ್ಲಿ ವಾಸ ಮಾಡುವುದೇ ಕಷ್ಟವಾಗಿದ್ದು,ನಮ್ಮ ಮಕ್ಕಳನ್ನು ಜೀವ ಬೆದರಿಕೆಯಿಂದ ರಕ್ಷಿಸಲು ಹಾಗೂ ತಮಗೆ ನ್ಯಾಯ ಒದಗಿಸುವಂತೆ ಎಂದು ಮನವಿ ಮಾಡಿದ್ದಾರೆ.







