ನನೆಗುದಿಗೆ ಬಿದ್ದ ಪ್ರಮುಖ ರಸ್ತೆಗಳ ಅಗಲೀಕರಣ ಯೋಜನೆ
ಗಮನಹರಿಸುವರೆ ಶಿವಮೊಗ್ಗ ಉಸ್ತುವಾರಿ ಸಚಿವರು?
ಶಿವಮೊಗ್ಗ, ಜ.2: ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಎರಡನೆ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ನಗರದ ಜನಸಂಖ್ಯೆ, ವಾಹನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಯಾಗುತ್ತಿಲ್ಲ.
ಅದರಲ್ಲಿಯೂ ವಿಶೇಷವಾಗಿ ರಸ್ತೆಗಳ ವಿಷಯದಲ್ಲಂತೂ ನಗರದ ಸ್ಥಿತಿ ಶೋಚನೀಯವಾಗಿದೆ. ಇದರಿಂದ ದಿನದಿಂದ ದಿನಕ್ಕೆ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯೇ ಅಸಾಧ್ಯ ಎನ್ನುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ನಗರದ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ, ಕೆಲ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕಳೆದ ಹಲವು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ರೂಪುರೇಷೆ ಸಿದ್ಧಪಡಿಸಿತ್ತು. ಕೆಲ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವುದರ ಜೊತೆಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಿತ್ತು.
ಆದರೆ ಸ್ಥಳೀಯ ಜನಪ್ರತಿನಿಧಿಗಳ ಅಸಹಕಾರ, ಅನುದಾನದ ಕೊರತೆ, ರಾಜಕೀಯ ಮೇಲಾಟ ಮತ್ತಿತರ ಕಾರಣಗಳಿಂದ ಅಭಿವೃದ್ಧಿ ಪ್ರಸ್ತಾಪ ಅಕ್ಷರಶಃ ನನೆಗುದಿಗೆ ಬೀಳುವಂತಾಗಿದೆ. ಇದೀಗ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳಿರಲಿ, ಜನ ಕೂಡ ಓಡಾಡಲು ಸಾಧ್ಯವಾಗದ ಮಟ್ಟಕ್ಕಿವೆ. ಮತ್ತೆ ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತ ಮಟ್ಟಕ್ಕೆ ತಲುಪಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಇನ್ನೂ ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ. ಇದರಿಂದ ನಾಗರಿಕರು ರಸ್ತೆಯ ಮಧ್ಯೆಯೇ ಓಡಾಡುವಂತಹ ದುಃಸ್ಥಿತಿಯಿದೆ. ಇದೀಗ ಮಹಾನಗರ ಪಾಲಿಕೆ ಆಡಳಿತ, ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಇಲಾಖೆಗಳು ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸುವ ಗೋಜಿಗೆ ಹೋಗುತ್ತಿಲ್ಲ. ಮತ್ತೊಂದೆಡೆ ಎಲ್ಲಿ ನಾಗರಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆಯೋ ಎಂಬ ಕಾರಣದಿಂದ ಜನಪ್ರತಿನಿಧಿಗಳು ಕೂಡ ರಸ್ತೆ ಅಗಲೀಕರಣದ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಇದರಿಂದ ನಗರದ ಅದೆಷ್ಟೋ ರಸ್ತೆಗಳು ಇಂದಿಗೂ 20-30 ವರ್ಷಗಳ ಹಿಂದೆ ಹೇಗಿದ್ದವೋ ಈಗಲೂ ಅದೇ ಸ್ಥಿತಿಯಲ್ಲಿವೆ. ಆಗಾಗ್ಗೆ ಡಾಂಬರು, ತೇಪೆ ಹಾಕುವ ಕೆಲಸವನ್ನಷ್ಟೇ ಮಾಡಲಾಗುತ್ತಿದೆ.
ನಿರ್ಲಕ್ಷ್ಯ: ಕಳೆದ ವರ್ಷ ನಗರದ ಪ್ರಮುಖ ರಸ್ತೆಗಳಲ್ಲೊಂದಾದ, ಅತ್ಯಧಿಕ ಜನ-ವಾಹನ ದಟ್ಟಣೆಯಿರುವ ಕುವೆಂಪು ರಸ್ತೆಯ ಅಗಲೀಕರಣಗೊಳಿಸಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಪಿಡಬ್ಲ್ಯೂಡಿ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಡಲಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆ, ರಸ್ತೆ ಅಭಿವೃದ್ಧಿಗೆ ಸರಿಸುಮಾರು 80 ಕೋಟಿ ರೂ. ಅನುದಾನ ಕೋರಲಾಗಿತ್ತು.
ಆದರೆ ಇಲ್ಲಿಯವರೆಗೆ ಈ ರಸ್ತೆಯ ಅಭಿವೃದ್ಧ್ದಿಗೆ ರಾಜ್ಯ ಸರಕಾರದಿಂದ ಅನುಮತಿ ಸಿಗುವುದಿರಲಿ, ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ. ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ‘ಈ ರಸ್ತೆ ನಮ್ಮ ಇಲಾಖೆಗೆ ಸೇರಿದ್ದಲ್ಲ. ಆದರೆ ಈ ರಸ್ತೆಯನ್ನು ತಮ್ಮ ಇಲಾಖೆಯ ಮೂಲಕ ಅಗಲೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ನಡೆಸಲು ಪಾಲಿಕೆ ಆಡಳಿತ ನಿರ್ಧರಿಸಿತ್ತು. ಅದರಂತೆ ಈ ರಸ್ತೆಯಲ್ಲಿ ತೆರವಾಗುವ ಕಟ್ಟಡಗಳ ಮಾಹಿತಿ, ಭೂ ಸ್ವಾಧೀನಕ್ಕೆ ಅಗತ್ಯವಾದ ಅನುದಾನ, ದ್ವಿಪಥ ಮಾರ್ಗ ನಿರ್ಮಾಣಕ್ಕೆ ತಗಲುವ ವೆಚ್ಚದ ಬಗ್ಗೆ ವರದಿ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ರಸ್ತೆ ಅಭಿವೃದ್ಧ್ದಿಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತಿದ್ದಂತೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳುತ್ತಾರೆ.
ಈ ರಸ್ತೆಯ ನಿವಾಸಿಯೊಬ್ಬರು ಮಾತನಾಡಿ, ‘ಈ ರಸ್ತೆಯು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮತ್ತು ನಗರದ ಪ್ರಮುಖ ರಸ್ತೆಗಳ ಸಂಪರ್ಕ ಕೊಂಡಿಯಾಗಿದೆ. ನಗರದ ಹೃದಯಭಾಗದಲ್ಲಿ ಹಾದು ಹೋಗಿದ್ದು, ಈ ರಸ್ತೆಯ ಇಕ್ಕೆಲಗಳಲ್ಲಿ ಸರಕಾರಿ ಕಚೇರಿ ಕಟ್ಟಡಗಳು ಸೇರಿದಂತೆ ಆಸ್ಪತ್ರೆಗಳು, ವ್ಯಾಪಾರ-ವಾಣಿಜ್ಯ ಸಂಬಂಧಿತ ಕಟ್ಟಡಗಳಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.
ಆದರೆ ಕಿರಿದಾಗಿರುವ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸಾಧ್ಯ ಎಂಬಂತಾಗಿದೆ. ಪಾದಚಾರಿ ಮಾರ್ಗವಂತೂ ಇಲ್ಲವಾಗಿದ್ದು, ರಸ್ತೆಯ ಮಧ್ಯೆಯೇ ಜನರು ಓಡಾಡುವಂತಾಗಿದೆ. ಹಲವೆಡೆ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡು ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಈ ಪ್ರಕ್ರಿಯೆ ನಡೆಸಿಲ್ಲ. ಇದು ಆಡಳಿತಗಾರರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ದೂರುತ್ತಾರೆ.
ಗಮನಹರಿಸಲಿ: ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರು ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ, ಸರಕಾರದಿಂದ ಸೂಕ್ತ ಅನುದಾನ ದೊರಕಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ನಗರದ ಹಲವು ರಸ್ತೆಗಳಲ್ಲಿ ವಾಹನಗಳಿರಲಿ, ಜನರೇ ಓಡಾಡಲು ತೊಂದರೆ ಪಡುವಂತಹ ಸ್ಥಿತಿ ಸೃಷ್ಟಿಯಾಗಲಿದೆ ಎಂದು ನಾಗರಿಕರು ಹೇಳುತ್ತಾರೆ.







