ಸೈಕಲ್ ಚಿಹ್ನೆ ಉಳಿಸಿಕೊಳ್ಳಲು ಮುಲಾಯಂ ಬೆಂಬಲಿಗರ ಹರಸಾಹಸ
ಹೊಸದಿಲ್ಲಿ, ಜ.2: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರಿಗೆ ನಿಷ್ಠರಾಗಿರುವ ಬೆಂಬಲಿಗರು, ಪಕ್ಷದ ಸೈಕಲ್ ಚಿಹ್ನೆಯನ್ನು ಮುಲಾಯಂ ಬಳಿಯೇ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದು, ರಾಜಧಾನಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಅಖಿಲೇಶ್ ಬಣ ಅಮರ್ ಸಿಂಗ್ ಹಾಗೂ ಶಿವಪಾಲ್ ಸಿಂಗ್ ಯಾದವ್ ಅವರನ್ನು ಉಚ್ಚಾಟಿಸಿದ್ದು, ಪಕ್ಷದ ಚಿಹ್ನೆ ಮುಲಾಯಂ ಸಿಂಗ್ ಬಳಿಯೇ ಉಳಿದುಕೊಳ್ಳುವಂತೆ ತಂತ್ರ ರೂಪಿಸಲು ರಾಷ್ಟ್ರರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದಾರೆ. ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಲಂಡನ್‌ನಿಂದ ವಾಪಸ್ಸಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಮರ್ ಸಿಂಗ್ ಅವರು, ನಾನು ಮುಲಾಯಂ ಸಿಂಗ್ ಬಳಿಯೇ ಇದ್ದೆ. ಅಲ್ಲೇ ಮುಂದುವರಿಯುತ್ತೇನೆ. ನಾನು ನಿಜವಾಗಿ ಹೀರೊ. ಆದರೆ ಅವರಿಗಾಗಿ ಈಗ ಖಳನಾಯಕನಾಗಲು ಸಿದ್ಧ ಎಂದು ಹೇಳಿದರು. ಅಖಿಲೇಶ್ ಬಣ ಉಚ್ಚಾಟಿಸಿರುವ ಬಗ್ಗೆ ಕೆದಕಿದಾಗ, ಮುಲಾಯಂ ನನ್ನ ವಿರುದ್ಧ ಏನಾದರೂ ಹೇಳಿದರೆ ಮಾತ್ರ ನೋವಾಗುತ್ತದೆ ಎಂದಷ್ಟೇ ಹೇಳಿದರು.
ಒಮ್ಮೆ ಮುಲಾಯಂ ಸಿಂಗ್ ಅವರು, ಅಮರ್ ಇಂದು ನಮ್ಮ ಪಕ್ಷದಲ್ಲಿಲ್ಲ; ಆದರೆ ಹೃದಯದಲ್ಲಿದ್ದಾರೆ ಎಂದು ಹೇಳಿದ್ದರು. ಒಂದು ವೇಳೆ ಮುಲಾಯಂ ಅವರು ತಮ್ಮ ಹೃದಯದಿಂದ ನನ್ನನ್ನು ಉಚ್ಚಾಟಿಸಿದರೆ ಮಾತ್ರ ಖೇದವಾಗುತ್ತದೆ ಎಂದರು. ಪಕ್ಷ ನನಗೆ ಮುಖ್ಯವಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅಮರ್, ನಾನೆಂದೂ ಇತರ ನಾಯಕರಂತೆ ರಾಜ್ಯಸಭೆ ಸ್ಥಾನಕ್ಕಾಗಿ ದುಂಬಾಲು ಬಿದ್ದಿರಲಿಲ್ಲ ಎಂದು ಹೇಳಿದರು.
ಈ ಮಧ್ಯೆ ಅಖಿಲೇಶ್ ಬಣದಿಂದ ಉಚ್ಚಾಟಿತರಾಗಿರುವ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಶಿವಪಾಲ್ ಕೂಡಾ, ಮುಲಾಯಂ ಜೊತೆ ಮುಂದುವರಿಯುವ ನಿರ್ಧಾರ ಪ್ರಕಟಿಸಿದ್ದಾರೆ, ನನ್ನ ಕೊನೆ ಉಸಿರಿನ ವರೆಗೂ ಮುಲಾಯಂ ಜೊತೆಗೆ ಇರುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಇಬ್ಬರು ನಾಯಕರು ಇತರರೊಂದಿಗೆ ಮುಲಾಯಂ ಅವರನ್ನು ಭೇಟಿ ಮಾಡಿ ಬಳಿಕ, ಚುನಾವಣಾ ಆಯೋಗವನ್ನು ಚಿಹ್ನೆ ಉಳಿಸುವ ಬಗ್ಗೆ ಮನವಿ ಸಲ್ಲಿಸಲಿದ್ದಾರೆ.







