ಬರಪರಿಹಾರ: ಕರ್ನಾಟಕಕ್ಕೆ 2,000 ಕೋಟಿ ರೂ.ಗಿಂತ ಕಡಿಮೆ ನೆರವು ಸಾಧ್ಯತೆ
ಹೊಸದಿಲ್ಲಿ, ಜ.2: ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಂಬಂತೆ ಕೇಂದ್ರದಿಂದ ದೊರಕುವ ನೆರವಿನಲ್ಲೂ ಕಡಿತ ಉಂಟಾಗುವ ಎಲ್ಲ ಸಾಧ್ಯತೆಗಳಿವೆ. ಮುಂಗಾರು ಬೆಳೆ ಹಾನಿಯಿಂದ ಆಗುವ ನಷ್ಟವನ್ನು ಭರ್ತಿ ಮಾಡಿಕೊಡಲು 4,702 ಕೋಟಿ ರೂಪಾಯಿ ಬರ ಪರಿಹಾರ ನೆರವು ನೀಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿದ್ದರೂ, ಸರಕಾರದ ಉಪಸಮಿತಿ ಮಾತ್ರ ಕೇವಲ 1,782 ಕೋಟಿ ರೂಪಾಯಿ ಪಾವತಿಸಲು ಶಿಫಾರಸು ಮಾಡಿದೆ.
ಆದರೆ ರಾಷ್ಟ್ರೀಯ ವಿಪತ್ತು ಸ್ಪಂದನೆ ನಿಧಿಯಿಂದ ನೆರವು ಬಿಡುಗಡೆ ಮಾಡುವ ಬಗ್ಗೆ ಅಂತಿಮ ನಿರ್ಧಾರವನ್ನು ಜನವರಿ 4ರಂದು ನಡೆಯುವ, ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಳ್ಳಲಾಗುತ್ತದೆ. ಬರ ಪರಿಸ್ಥಿತಿ ಕುರಿತ ಉಪಸಮಿತಿ, ರಾಜ್ಯ ಸರಕಾರದ ಪ್ರಸ್ತಾವನೆಗಳನ್ನು ಪರಿಶೀಲಿಸಿದ್ದು, ಇದರ ಜೊತೆಗೆ ಕೇಂದ್ರ ಬರ ಪರಿಹಾರ ಅಧ್ಯಯನ ತಂಡ ನೀಡಿದ ವರದಿಯನ್ನೂ ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ಬರ ಮಾರ್ಗಸೂಚಿಯ ಅನ್ವಯ ಉಪಸಮಿತಿಯು 1,784.44 ಕೋಟಿ ರೂಪಾಯಿ ಬರ ಪರಿಹಾರಕ್ಕೆ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ. ಸಮಿತಿ ಶಿಫಾರಸು ಮಾಡಿರುವ ಮೊತ್ತವು ರಾಜ್ಯ ಸರಕಾರ ಕೋರಿರುವ ಮೊತ್ತಕ್ಕಿಂತ ಶೇ.38ರಷ್ಟು ಕಡಿಮೆ.
ಕಳೆದ 40 ವರ್ಷಗಳಲ್ಲೇ ಅತ್ಯಂತ ಭೀಕರ ಬರಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ರಾಜ್ಯದ 176 ತಾಲೂಕುಗಳ ಪೈಕಿ, 139 ಬರದ ದವಡೆಗೆ ಸಿಲುಕಿವೆ.





