ಭತ್ತೆಗೆ ಬ್ಯಾಂಕ್ ಕಾರ್ಮಿಕರ ಆಗ್ರಹ
ನೋಟ್ ಬ್ಯಾನ್ ಅವಧಿಯಲ್ಲಿ ಹೆಚ್ಚುವರಿ ದುಡಿಮೆ
ಹೊಸದಿಲ್ಲಿ,ಜ.2: ನಗದು ಅಮಾನ್ಯತೆ ಪ್ರಕ್ರಿಯೆಯ ಅವಧಿಯಲ್ಲಿ ಕಠಿಣ ಪರಿಶ್ರಮ ದೊಂದಿಗೆ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಬ್ಯಾಂಕ್ ಉದ್ಯೋಗಿಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ ಬೆನ್ನಲ್ಲೇ ಬ್ಯಾಂಕ್ ಒಕ್ಕೂಟವೊಂದು, ಡಿಸೆಂಬರ್ 30ರಂದು ಕೊನೆಗೊಂಡ 50 ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿಯ ಹೆಚ್ಚುವರಿ ತಾಸುಗಳ ದುಡಿಮೆಗೆ ಓವರ್‌ಟೈಮ್ ಭತ್ತೆ ನೀಡಬೇಕೆಂದು ಸೋಮವಾರ ಆಗ್ರಹಿಸಿದೆ.
ಭಾರತೀಯ ಮಜ್ದೂರ್ ಸಂಘದ ಸಹಸಂಸ್ಥೆಯಾಗಿರುವ ರಾಷ್ಟ್ರೀಯ ಬ್ಯಾಂಕ್ ಕಾರ್ಮಿಕರ ಸಂಘಟನೆ (ಎನ್‌ಒಬಿಡಬ್ಲು) ಪ್ರಧಾನಿಗೆ ಬರೆದ ಪತ್ರದಲ್ಲಿ ಈ ಬೇಡಿಕೆಯಿಟ್ಟಿದೆ. ‘‘ಕಳೆದ 50 ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳು ಪ್ರತಿದಿನ 12ರಿಂದ 18 ತಾಸುಗಳವರೆಗೆ ದುಡಿದಿದ್ದಾರೆ. ಕೆಲವು ಬ್ಯಾಂಕ್‌ಗಳು ಮಾತ್ರ ಹೆಚ್ಚುವರಿ ದುಡಿಮೆಗಾಗಿ ಓವರ್‌ಟೈಮ್ ಭತ್ತೆಯನ್ನು ನೀಡುವ ಬಗ್ಗೆ ಪರಿಶೀಲಿಸುತ್ತಿವೆ. ಹೆಚ್ಚುವರಿ ತಾಸುಗಳ ದುಡಿಮೆಗಾಗಿ ಎಲ್ಲಾ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ಓವರ್‌ಟೈಮ್ ಭತ್ತೆ ನೀಡುವುದನ್ನು ಪರಿಗಣಿಸಬೇಕೆಂದು ದಯ ವಿಟ್ಟು ಬ್ಯಾಂಕ್‌ಗಳ ಆಡಳಿತವರ್ಗಕ್ಕೆ ಸಲಹೆ ನೀಡಬೇಕು’’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ನೇಮಕಾತಿ ಪ್ರಕ್ರಿಯೆಗಳನ್ನು ಚುರುಕುಗೊಳಿಸುವಂತೆಯೂ ಪತ್ರವು ಆಗ್ರಹಿಸಿದೆ ಮತ್ತು ಸರಕಾರದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿದೆಯೆಂದು ಅದು ಪ್ರಧಾನಿಯ ಗಮನಸೆಳೆದಿದೆ. ಈ ವರ್ಷದ ನವೆಂಬರ್‌ನಲ್ಲಿ ವೇತನ ಪರಿಷ್ಕರಣೆಯ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನದಲ್ಲಿ ತೃಪ್ತಿಕರವಾದ ಏರಿಕೆಯನ್ನು ಮಾಡುವಂತೆಯೂ ಎನ್‌ಒಬಿಡಬ್ಲು ಉಪಾಧ್ಯಕ್ಷ ಅಶ್ವನಿ ರಾಣಾ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಡಿಸೆಂಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೋಟು ಅಮಾನ್ಯತೆ ಪ್ರಕ್ರಿಯೆಯ ಅವಧಿಯಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳು ಹಗಲು ರಾತ್ರಿಯೆನ್ನದೆ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದ್ದರು. ಅಂಚೆಕಚೇರಿ ಸಿಬ್ಬಂದಿ, ಬ್ಯಾಂಕಿಂಗ್ ಪ್ರತಿನಿಧಿಗಳು ಕೂಡಾ ಅಸಾಧಾರಣವಾದ ಸೇವೆ ಸಲ್ಲಿಸಿದ್ದರೆಂದು ಅವರು ಹೇಳಿದರು.





