ನೋಟು ನಿಷೇಧ: ಪ್ರತಿಕ್ರಿಯಿಸದ ನಿತೀಶ್
ಪಾಟ್ನಾ, ಜ.2: ನಗದು ಅಮಾನ್ಯತೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಸೋಮವಾರ ಮತ್ತೊಮ್ಮೆ ನಿರಾಕರಿಸಿದ್ದಾರೆ. ಇದರೊಂದಿಗೆ ನೋಟು ನಿಷೇಧದ ವಿರುದ್ಧ ತಾವು ನಡೆಸುತ್ತಿರುವ ಹೋರಾಟದಲ್ಲಿ ನಿತೀಶ್ ಪಾಲ್ಗೊಳ್ಳುವರೆಂಬ ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷಗಳಿಗೆ ತೀವ್ರ ನಿರಾಶೆಯಾಗಿದೆ.
ಪಾಟ್ನಾದಲ್ಲಿ ಸೋಮವಾರ ನಡೆದ ‘ಲೋಕ ಸಂವಾದ’ ಕಾರ್ಯಕ್ರಮದಲ್ಲಿ ನಗದು ಅಮಾನ್ಯತೆ ಕುರಿತು ತನ್ನನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಅವರು, ನೋಟು ನಿಷೇಧಕ್ಕಿಂತಲೂ ಹೆಚ್ಚಾಗಿ ಬಿಹಾರದಲ್ಲಿ ನಡೆಯುತ್ತಿರುವ ಒಳ್ಳೆಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವಂತೆ ಮನವಿ ಮಾಡಿದರು. ಗುರುಗೋವಿಂದ ಸಿಂಗ್ ಅವರ 350ನೆ ಜನ್ಮದಿನಾಚರಣೆಯ ಅಂಗವಾಗಿ ಬಿಹಾರದಲ್ಲಿ ಆಚರಿಸಲಾಗುತ್ತಿರುವ ‘ಪ್ರಕಾಶ್‌ಪರ್ವ’ದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಭಕ್ತರು ಸಿಹಿನೆನಪಿನೊಂದಿಗೆ ವಾಪಸಾಗುತ್ತಿದ್ದರೆಂದು ಅವರು ಹೇಳಿರದು.
ಪ್ರಕಾಶ್‌ಪರ್ವ ಕಾರ್ಯಕ್ರಮವು ಡಿಸೆಂಬರ್ 25ರಂದು ಆರಂಭಗೊಂಡಿದ್ದು, ಜನವರಿ 5ರಂದು ಸಮಾರೋಪಗೊಳ್ಳಲಿದೆ. ಈ ಪ್ರಯುಕ್ತ ಪಾಟ್ನಾದಲ್ಲಿ ಜನವರಿ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ನಗದು ಅಮಾನ್ಯತೆಯ ಬಗ್ಗೆ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿರದಿದ್ದರೂ, ಜೆಡಿಯು ಪಕ್ಷವು ಜನವರಿ 5ರಂದು ಪ್ರಕಾಶ್‌ಪರ್ವ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ, ನೋಟು ಅಮಾನ್ಯತೆ ಪ್ರಕ್ರಿಯೆಯ ಕುರಿತು ಪರಿಶೀಲನೆ ನಡೆಸುವುದಾಗಿ ಅದು ಹೇಳಿದೆ.
ಕರೆನ್ಸಿ ನಿಷೇಧವನ್ನು ಬೆಂಬಲಿಸಿದ್ದ ನಿತೀಶ್‌ಕುಮಾರ್ ಇತ್ತೀಚೆಗೆ ನೀಡಿದ ಹೇಳಿಕೆಯೊಂದರಲ್ಲಿ 50 ದಿನಗಳ ನಗದು ಅಮಾನ್ಯತೆ ಅಭಿಯಾನ ಪೂರ್ಣಗೊಂಡ ಬಳಿಕ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದರು.





