ಹಿಂಸಾಚಾರಕ್ಕೆ ತಿರುಗಿದ ಕಾಸರಗೋಡು ಬಂದ್

ಕಾಸರಗೋಡು, ಜ.3: ಬಿಜೆಪಿ ಜಿಲ್ಲಾ ಸಮಿತಿ ಮಂಗಳವಾರ ಕರೆ ನೀಡಿದ್ದ ಕಾಸರಗೋಡು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕು ಸುತ್ತು ಅಶ್ರುವಾಯು ಪ್ರಯೋಗಿಸಿದರು. ಕಿಡಿಗೇಡಿಗಳು ಪೋಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು, ಹಲವೆಡೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ಘರ್ಷಣೆ ನಡೆಯಿತು.
ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂರಕ್ಷಣಾ ಪಾದಯಾತ್ರೆ ಮೇಲೆ ಕಲ್ಲುತೂರಾಟ ಮತ್ತು ಸಂಚಾರಕ್ಕೆ ತಡೆಯೊಡ್ಡಿದೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರ ಬಂಧನವನ್ನು ಖಂಡಿಸಿ ಬಿಜೆಪಿ ಇಂದು ಕಾಸರಗೋಡು ಬಂದ್ ಗೆ ಕರೆ ನೀಡಿತ್ತು.
ಬಂದ್ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿದ್ದು, ಹಲವು ವಾಹನಗಳ ಮೇಲೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ರಸ್ತೆಗಿಳಿದ ವಾಹನಗಳನ್ನು ಬಲವಂತವಾಗಿ ತಡೆದರು. ತೆರೆದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಈ ನಡುವೆ ನಗರದಲ್ಲಿರುವ ಸಿಪಿಎಂ ಅಧೀನತೆಯಲ್ಲಿರುವ ಜಿಲ್ಲಾ ಸಹಕಾರಿ ಬ್ಯಾ೦ಕ್ ಮೇಲೆ ಬಂದ್ ಬೆಂಬಲಿಗರು ಕಲ್ಲುತೂರಾಟ ನಡೆಸಿದ್ದು, ನಗರದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನಿಯಂತ್ರಣಕ್ಕೆ ಬಾರದಿದ್ದಾಗ ನಾಲ್ಕು ಸುತ್ತು ಅಶ್ರುವಾಯು ಸಿಡಿಸಿದರು.
ಖಾಸಗಿ , ಕೆಎಸ್ಸಾರ್ಟಿಸಿ ಬಸ್ಸು ಸಂಚಾರ ಮೊಟಕುಗೊಂಡಿವೆ. ದ್ವಿಚಕ್ರ ಸೇರಿದಂತೆ ಕೆಲವೇ ಕೆಲ ಖಾಸಗಿ ವಾಹನಗಳು ಮಾತ್ರ ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲಾಗಿದ್ದು, ಬಹುತೇಕ ಶಾಲೆಗಳಿಗೆ ರಜೆ ನೀಡಲಾಗಿದ್ದು, ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿದೆ.
ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆಗಮಿಸುವ ಎಲ್ಲಾ ವಾಹನಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ತಡೆದರು. ಬೆಳಗ್ಗೆ ಕೆಲವೊಂದು ವಾಹನಗಳು ರಸ್ತೆಗಿಳಿದರೂ ಬಂದ್ ಬೆಂಬಲಿಗರು ತಡೆದರು. ಬೆಳಗ್ಗೆ ರೈಲುಗಳಲ್ಲಿ ಕಾಸರಗೋಡಿಗೆ ತಲಪಿದ ಪ್ರಯಾಣಿಕರು ವಾಹನ ಸೌಕರ್ಯ ಇಲ್ಲದೆ ಪರದಾಡುವಂತಾಯಿತು.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಸುರೇಂದ್ರನ್, ಜಿಲ್ಲಾಧ್ಯಕ್ಷ ಕೆ .ಶ್ರೀಕಾಂತ್, ವಲ್ಸನ್ ತಿಲ್ಲಂಗೇರಿ ಸೇರಿದಂತೆ 32 ಮಂದಿಯನ್ನು ರಾತ್ರಿ ಬಿಡುಗಡೆಗೊಳಿಸಲಾಗಿದೆ. ಸೋಮವಾರ ನಡೆದ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ ಚಂದೇರ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜಾಮೀನು ರಹಿತ ಮೊಕದ್ದಮೆಗಳನ್ನು ಇವರ ಮೇಲೆ ಹೂಡಲಾಗಿದೆ . ಚಂದೇರ ಠಾಣಾ ಸಬ್ ಇನ್ ಸ್ಪೆಕ್ಟರ್ ಅನೂಪ್ ಕುಮಾರ್ ರವರ ದೂರಿನಂತೆ ಎರಡು ಕೇಸು ದಾಖಲಿಸಲಾಗಿದೆ. ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ.
ಹಿಂಸಾಚಾರದಿಂದ ಹೊಸದುರ್ಗ ಸರ್ಕಲ್ ಇನ್ ಸ್ಪೆಕ್ಟರ್ ಸಿ .ಕೆ ಸುನಿಲ್ ಕುಮಾರ್, ವೆಳ್ಳರಿ ಕುಂಡು ಸರ್ಕಲ್ ಇನ್ ಸ್ಪೆಕ್ಟರ್ ಸೇರಿದಂತೆ 12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. 15ಕ್ಕೂ ಅಧಿಕ ಬಿಜೆಪಿ ಮತ್ತು ಸಿಪಿಎ೦ ಕಾರ್ಯಕರ್ತರಿಗೆ ಗಾಯಗಳಾಗಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಸೋಮವಾರ ಹಿಂಸಾಚಾರ ನಡೆದ ಚಿಮೇನಿ , ಚೆರ್ವತ್ತೂರಿನಲ್ಲಿ ಸ್ಥಿತಿ ಶಾಂತವಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿದ್ದು ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದು, ಈ ಪರಿಸರದಲ್ಲಿ ಬಂದ್ ಯಾವುದೇ ಪರಿಣಾಮ ಬೀರಲಿಲ್ಲ.







