ಮಹದೇವ್ ಪ್ರಸಾದ್ ನಿಧನ ಗೌರವಾರ್ಥ ಇಂದು ಸರಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ

ಬೆಂಗಳೂರು, ಜ.3: ಸಹಕಾರ ಹಾಗೂ ಸಕ್ಕರೆ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ ಮಂಗಳವಾರ ಬೆಳಗ್ಗೆ ಅಕಾಲಿಕ ನಿಧನರಾದ ಕಾರಣ ರಾಜ್ಯ ಸರಕಾರ ಸಂತಾಪ ವ್ಯಕ್ತಪಡಿಸಿದ್ದು, ಸಚಿವರ ನಿಧನದ ಗೌರವಾರ್ಥ ರಾಜ್ಯದಲ್ಲಿನ ಎಲ್ಲ ಸರಕಾರಿ ಕಚೇರಿಗಳಿಗೂ, ಎಲ್ಲ ಶಾಲಾ-ಕಾಲೇಜುಗಳಿಗೂ(ಅನುದಾನ ಪಡೆಯುವ ಎಲ್ಲ ವಿದ್ಯಾ ಸಂಸ್ಥೆಗಳೂ ಸೇರಿದಂತೆ) ದಿನಾಂಕ 03.01.2017 ಮಂಗಳವಾರ ರಜೆ ಘೋಷಿಸಲಾಗಿದೆ.
ಅಲ್ಲದೆ ಜ.3 ರಿಂದ 5ರ ವರೆಗೆ ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸಲಾಗುವ ಸರಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಜ.4 ರಂದು ಮೃತರ ಅಂತ್ಯಸಂಸ್ಕಾರ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆಯುವ ಕಾರಣ ಚಾಮರಾಜನಗರ ಜಿಲ್ಲೆಗೆ ಅನ್ವಯವಾಗುವಂತೆ ಜ.4 ರಂದು ಸಹ ರಜೆ ಘೋಷಿಸಲಾಗಿದೆ ಎಂದು ಸರಕಾರದ ಅಧೀನ ಕಾರ್ಯದರ್ಶಿ(ರಾಜ್ಯ ಶಿಷ್ಠಾಚಾರ) ಡಾ.ಬಿಎಸ್ ಮಂಜುನಾಥ ಸ್ವಾಮಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.





