ಕೊಲೆಪ್ರಕರಣ: ಕತರ್‌ನಲ್ಲಿ 2 ಭಾರತೀಯರ ಗಲ್ಲುಶಿಕ್ಷೆ ಖಾಯಂ

ದೋಹ,ಜ.3: ಕತರ್‌ನ ಸ್ವದೇಶಿ ಮಹಿಳೆಯೊಬ್ಬರನ್ನು ಕೊಲೆಮಾಡಿದ ಪ್ರಕರಣದಲ್ಲಿ ಇಬ್ಬರು ಭಾರತೀಯರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಕತರ್ ಸುಪ್ರೀಂಕೋರ್ಟು ಖಾಯಂಗೊಳಿಸಿದೆ. ಆರೋಪಿಗಳಾದ ತಮಿಳ್ನಾಡಿನ ಚೆಲ್ಲುದೊರೈ ಪೆರುಮಾಳ್, ಅಳಗಪ್ಪ ಸುಬ್ರಹ್ಮಮಣ್ಯನ್‌ರ ಅಪೀಲನ್ನು ಕೋರ್ಟು ತಿರಸ್ಕರಿಸಿದ್ದು,ಕೆಳಕೋರ್ಟು ನೀಡಿದ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿತು. ಮೂರನೆ ಆರೋಪಿ ಶಿವಕುಮಾರ್ ಅರಸ್ ಎಂಬಾತನಿಗೆ ನೀಡಲಾಗಿದ್ದ ಜೀವಾವಧಿಶಿಕ್ಷೆಯನ್ನು 15ವರ್ಷಕ್ಕೆ ಕಡಿತಗೊಳಿಸಿ ತೀರ್ಪುನೀಡಿದೆ. ಎಂದು ಗಲ್ಫ್ ಟೈಮ್ಸ್ ವರದಿ ಮಾಡಿದೆ.
ನಾಲ್ಕು ವರ್ಷ ಹಿಂದೆ 2012ರಲ್ಲಿ ಜದಿದಿ ಎಂಬಲ್ಲಿ ಘಟನೆ ನಡೆದಿತ್ತು. ಕೊಲೆಯಾದ ಮಹಿಳೆ ವಾಸವಿದ್ದ ಮನೆ ಸಮೀಪ ಕನ್ಸ್‌ಸ್ಟ್ರಕ್ಸನ್ ಸೈಟ್‌ನಲ್ಲಿ ಮೂವರು ಆರೋಪಿಗಳು ಕೆಲಸದಲ್ಲಿದ್ದರು. ಕೊಲೆಯಾದ ಮಹಿಳೆ 82ವರ್ಷದ ವಯೋವೃದ್ಧೆಯಾಗಿದ್ದಾರೆ. ವೃದ್ಧೆಯೊಂದಿಗೆ ಮನೆಕೆಲಸದ ಮಹಿಳೆ ಮಾತ್ರ ವಾಸವಿದ್ದರು. ರಮಝಾನ್ ಸಮಯದಲ್ಲಿ ಆರೋಪಿಗಳನ್ನು ಮನೆಗೆ ಕರೆದು ಇವರು ಊಟ ಹಾಕಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಇಬ್ಬರೇ ಇರುವುದನ್ನು ಖಾತ್ರಿಪಡಿಸಿಕೊಂಡ ಆರೋಪಿಗಳು ಕಳ್ಳತನಕ್ಕೆ ಯತ್ನಿಸಿದ ವೇಳೆ ಮನೆ ಕೆಲಸದ ಮಹಿಳೆ ಮತ್ತು ವೃದ್ದೆ ನಿದ್ರಿಸುತ್ತಿದ್ದರು. ಸದ್ದು ಕೇಳಿ ಎಚ್ಚರಗೊಂಡದ್ದರಿಂದ ವೃದ್ಧೆಯನ್ನು ಕೊಲೆಮಾಡಿ ಪರಾರಿಯಾಗಿದ್ದರು. ಮನೆಕೆಲಸದ ಮಹಿಳೆ ಪ್ರಕರಣದಲ್ಲಿ ಏಕೈಕ ಸಾಕ್ಷಿಯಾಗಿದ್ದು, ಘಟನೆ ನಡೆದು ಕೆಲವು ದಿವಸಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕೆಳಕೋರ್ಟಿನ ವಿಚಾರಣೆ ವೇಳೆ
ಕೊಲೆಯಾದ ವೃದ್ಧೆ ಕುಟುಂಬದವರು ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದರು. ಈಗ ಕತರ್ ಸುಪ್ರೀಂಕೋರ್ಟು ಕೆಳಕೋರ್ಟು ಹಿಂದೆ ನೀಡಿದ್ದ ತೀರ್ಪಿನಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿ ಆರೋಪಿಗಳಲ್ಲಿ ಇಬ್ಬರ ಗಲ್ಲುಶಿಕ್ಷೆಯನ್ನು ದೃಢೀಕರಿಸಿದೆ ಎಂದು ವರದಿಯಾಗಿದೆ.







