ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದ ಹೇಯ ಘಟನೆಗೆ ಎಸ್ಪಿ ನಾಯಕನ ವಿವಾದಾತ್ಮಕ ಪ್ರತಿಕ್ರಿಯೆ

ಮುಂಬೈ,ಜ.3: ಬೆಂಗಳೂರಿನ ಬೀದಿಗಳಲ್ಲಿ ಡಿ.31ರ ರಾತ್ರಿ ಹೊಸ ವರ್ಷಾಚರಣೆ ಸಂದರ್ಭ ಕೆಲವು ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ನೀಡಲಾಗಿದ್ದ ಹೇಯ ಘಟನೆಗೆ ಪ್ರತಿಕ್ರಿಯಿಸುವ ಮೂಲಕ ಮುಂಬೈನ ಸಮಾಜವಾದಿ ಪಕ್ಷದ ನಾಯಕ ಅಬು ಆಝ್ಮಿ ಅವರು ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಸಂತ್ರಸ್ತ ಮಹಿಳೆಯರು ಭಾರತೀಯ ಸಂಸ್ಕೃತಿಯನ್ನು ಮರೆತಿದ್ದರು ಎಂದು ಹೇಳುವ ಮೂಲಕ ಈ ಘಟನೆಗೆ ಅವರೇ ಕಾರಣ ಎಂದು ಆಝ್ಮಿ ಪರೋಕ್ಷವಾಗಿ ದೂರಿದ್ದಾರೆ.
ಇದೊಂದು ವಿಷಾದಕರ ಘಟನೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಆದರೆ ಮದುವೆಯಾಗದ ಹುಡುಗ-ಹುಡುಗಿ ಒಟ್ಟಾಗಿ ತಿರುಗುವುದರ ವಿರುದ್ಧ ನಾವೇನಾದರೂ ಹೇಳಿದರೆ ನಮ್ಮನ್ನು ಹಳೆಯ ಕಾಲದವರು ಎಂದು ಟೀಕಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಮತ್ತು ಪುರುಷರು ಪರಸ್ಪರ ಭೇಟಿಯಾಗುವದರಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಹೆಚ್ಚೆಚ್ಚು ಮೈ ತೋರಿಸಿದಷ್ಟೂ, ಹೆಚ್ಚೆಚ್ಚು ಫ್ಯಾಷನ್ ಮಾಡಿದಷ್ಟೂ ಅವರನ್ನು ಹೆಚ್ಚು ಆಧುನಿಕರು ಮತ್ತು ಸುಶಿಕ್ಷಿತರು ಎಂದು ಪರಿಗಣಿಸಲಾಗುತ್ತಿದೆ. ಈ ಪ್ರವೃತ್ತಿ ನಮ್ಮ ದೇಶದಲ್ಲಿ ಹೆಚ್ಚುತ್ತಿದ್ದು, ಇದು ನಮ್ಮ ಸಂಸ್ಕೃತಿಗೆ ಕಳಂಕವಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಝ್ಮಿ ಹೇಳಿದರು.
ಡಿ.31ರಂದು ರಾತ್ರಿ ಬೆಂಗಳೂರಿನ ಬೀದಿಗಳಲ್ಲಿ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳಕ್ಕೊಳಗಾದ ಕೆಲವು ಮಹಿಳೆಯರು ಅಳುತ್ತಿದ್ದ ಚಿತ್ರಗಳು ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿವೆ. ತಮಗೆ ಕಿರುಕುಳ ನೀಡಿರುವ ಬಗ್ಗೆ ಹಲವಾರು ಮಹಿಳೆಯರು ದೂರಿಕೊಂಡಿದ್ದಾರೆ. ಇಂತಹ ಘಟನೆಗಳು ನಡೆಯುತ್ತಿರುತ್ತವೆ ಎಂದು ‘ಅಪ್ಪಣೆ ’ಕೊಡಿಸಿರುವ ಕರ್ನಾಟಕದ ಗೃಹಸಚಿವ ಜಿ.ಪರಮೇಶ್ವರ ಅವರು, ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಪೊಲೀಸರ ವೈಫಲ್ಯಕ್ಕೆ ಕ್ಷಮೆಯನ್ನು ಕೋರುವ ಗೋಜಿಗೆ ಹೋಗಿಲ್ಲ
ತಮ್ಮ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂತ್ರಸ್ತ ಮಹಿಳೆಯರೇ ಕಾರಣ ಎಂಬರ್ಥದ ತನ್ನ ಹೇಳಿಕೆಯ ಕುರಿತ ಪ್ರಶ್ನೆಗೆ ಆಝ್ಮಿ, ಅದು ಹಾಗಲ್ಲ. ಬೆಂಗಳೂರಿನಲ್ಲಿ ನಡೆದಿರುವ ಘಟನೆಗೆ ಅವರೇ ಕಾರಣವೆಂದಲ್ಲ.. ಆದರೆ ನಮ್ಮ ಸುರಕ್ಷತೆಯ ಬಗ್ಗೆ ನಾವೇ ಕಾಳಜಿ ವಹಿಸಬೇಕು. ನನ್ನ ಮಗಳು ಅಥವಾ ಸೋದರಿ ಡಿ.31ರಂದು ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದರೆ ಮತ್ತು ಆ ವೇಳೆ ಆಕೆಯ ತಂದೆ ಅಥವಾ ಪತಿ ಅವಳ ಜೊತೆಗಿಲ್ಲವೆಂದಾದರೆ ಸುತ್ತಲಿರುವವರು ಆಕೆಯನ್ನು ಗೌರವದಿಂದ ನೋಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ ಎಂದು ವಿವರಿಸಿದರು







