ಪಿಣರಾಯಿ ಮಾತಾಡದ ಮೋದಿ: ಸಿಪಿಐ ಟೀಕೆ
.jpg)
ತಿರುವನಂತಪುರಂ,ಜ.3: ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಚಿವ ಎ.ಕೆ.ಬಾಲನ್ ವಿರುದ್ಧ ಸಿಪಿಐ ಕಾರ್ಯಕಾರಿ ಸಮಿತಿ ಯಲ್ಲಿ ಕಟು ಟೀಕೆ ವ್ಯಕ್ತವಾಗಿದೆ. ಪಿಣರಾಯಿ ಮಾತಾಡದ ಮೋದಿ ಎಂದು ಕರೆಯಲಾಗಿದ್ದು, ಸಿಪಿಐ ಸಚಿವರ ಖಾತೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಆಳ್ವಿಕೆಗೆ ಅವರು ಯತ್ನಿಸುವುದು ಬೇಡ ಎಂದು ಸಿಪಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಚಿವರಲ್ಲಿ ಪರಸ್ಪರ ಒಗ್ಗಟ್ಟಿಲ್ಲ. ಆದರೆ, ಪಿಣರಾಯಿ ವಿಜಯನ್‌ಗೆ ಸಚಿವರ ಖಾತೆಗಳ ಕುರಿತು ಏನೂ ಗೊತ್ತಿಲ್ಲದಿದ್ದರೂ ಎಲ್ಲಾ ಗೊತ್ತಿದೆ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಪಿಣರಾಯಿ ಅವರದು ಏಕಪಕ್ಷೀಯ ವರ್ತನೆಯೆಂದು ಸಿಪಿಐ ಸಭೆಯಲ್ಲಿ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಚಿವರ ವೈಯಕ್ತಿಕ ಸಿಬ್ಬಂದಿಯ ಸಭೆಕರೆದ ಕ್ರಮದ ಬಗ್ಗೆ ಸಹ ಆಕ್ರೋಶ ವ್ಯಕ್ತವಾಗಿದೆ.
ಸಿಪಿಐ ರಾಜ್ಯ ಸಹಾಯಕ ಕಾರ್ಯದರ್ಶಿ ಸತ್ಯನ್ ಮೊಕ್ಕೇರಿ ಪಿಣರಾಯಿಯನ್ನು ಕಟುವಾಗಿ ಟೀಕಿಸಿ ಮಾತಾಡಿದರು. ಆದರೆ ವೈಯಕ್ತಿಕ ಸಿಬ್ಬಂದಿಯ ಸಭೆಕರೆದದ್ದರಲ್ಲಿ ಏನೂ ತಪ್ಪಿಲ್ಲ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಹೇಳಿದರು. ಸಭೆಯಲ್ಲಿಇಂಧನ ಸಚಿವ ಎ.ಕೆ.ಬಾಲನ್ ವಿರುದ್ಧ ಕೂಡಾ ಕಟು ಟೀಕೆ ವ್ಯಕ್ತವಾಗಿದೆ. ಸಿಪಿಐ ಸಚಿವರನ್ನು ಬಾಲನ್ ಇತ್ತೀಚೆಗೆ ಟೀಕಿಸಿದ್ದರು. ಬಾಲನ್ ಹುಟ್ಟಿದಾಗಲೇ ಆಡಳಿತಗಾರ ಆಗಿದ್ದರೇ? ಸಿಪಿಎಂ ವಶದಲ್ಲಿರುವ ಭೂಮಿಗೆ ಉಪಾಯವಾಗಿ ಪಟ್ಟೆ ತಯಾರಿಸಲು ಯಾರೂ ನೋಡಬೇಕಾಗಿಲ್ಲ ಎಂದು ಬಾಲನ್ ವಿರುದ್ಧ ಸಭೆಯಲ್ಲಿ ಟೀಕೆ ಕೇಳಿಬಂದಿವೆ.
ಸಿಪಿಐ ಕೇರಳದಲ್ಲಿ ಸೃಷ್ಟಿಯಾದ ಪಡಿತರ ಸಮಸ್ಯೆ ಕುರಿತು ಸ್ವಯಂ ಅವಲೋಕನವನ್ನು ನಡೆಸಿತು. ನೋಟು ಸಮಸ್ಯೆಯ ನಡುವೆ ಪಡಿತರ ತಡೆಹಿಡಿದುದರ ನೈಜ ಕಾರಣವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಪಡಿತರ ಹಂಚಿಕೆ ಪ್ರಮಾಣದಲ್ಲಿ ಕೇಂದ್ರ ಸರಕಾರ ಕಡಿತ ಮಾಡಿರುವುದು ಸಮಸ್ಯೆಗೆ ಕಾರಣವೆಂದು ಸಿಪಿಐ ಹೇಳಿದೆ ಎಂದು ವರದಿಯಾಗಿದೆ.







