ಬೆಳ್ತಂಗಡಿ : ಕಾವೇರುತ್ತಿರುವ ಎಪಿಎಂಸಿ ಚುಣಾವಣೆ
ಬೆಳ್ತಂಗಡಿ , ಜ.3 : ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 14 ಸ್ಥಾನಗಳಿಗೆ ಜ. 12 ರಂದು ಚುನಾವಣೆ ನಡೆಯಲಿದ್ದು , ನಾಮಪತ್ರಗಳ ಹಿಂತೆಗೆತ ಕಾರ್ಯ ಪೂರ್ಣಗೊಂಡಿದ್ದು , ಎರಡು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಉಳಿದ 12 ಸ್ಥಾನಗಳಿಗೆ 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಸಹಕಾರಿ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಮಾಜಿ ಜಿ.ಪಂ ಸದಸ್ಯ, ಹಿರಿಯ ಸಹಕಾರಿ ಇ. ಸುಂದರ ಗೌಡ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಯಾಗಿದ್ದಾರೆ . ಕೃಷಿ ಉತ್ಪನ್ನಗಳ ಮಾರಾಟ ವ್ಯವಹಾರದ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಮಾಜಿ ತಾ. ಪಂ ಸದಸ್ಯ, ಟಿಎಪಿಎಂಎಸ್ ಅಧ್ಯಕ್ಷ ಜೀವಂಧರ ಕುಮಾರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಅಧಿಕಾರ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದು ಎಲ್ಲ ಸ್ಥಾನಗಳಿಗೂ ಪಕ್ಷದ ಬೆಂಬಲಿಗರು ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಅವಧಿಯ ಆರಂಭದ ಎರಡು ವರ್ಷ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಇದೀಗ ಕಳೆದುಕೊಂಡ ಅಧಿಕಾರವನ್ನು ಮರಳಿ ಪಡೆಯಲು ಸಿದ್ದವಾಗಿದ್ದು 12 ಸ್ಥಾನಗಳಿಗೆ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿಯಿದ್ದು ವಿಮಲ ಮೇಲಂತಬೆಟ್ಟು ಹಾಗೂ ಪಲ್ಲವಿ ಸುದೆಮುಗೇರು, ಉಜಿರೆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು ಕೇಶವ ಪಿ ಬೆಳಾಲು ಹಾಗೂ ಕೇಶವ ಭಟ್ ಅತ್ತಾಜೆ , ಇಂದಬೆಟ್ಟು ಕ್ಷೇತ್ರ ಅನುಸೂಚಿತ ಪಂಗಡ ಮೀಸಲಾತಿಯಿದ್ದು ಲಕ್ಷ್ಮಣ ನೆರಿಯ ಹಾಗೂ ಆನಂದನಾಯ್ಕ ಕಲ್ಮಂಜ, ಸಾಮಾನ್ಯ ಮೀಸಲಾತಿಯಿರುವ ನೆರಿಯ ಕ್ಷೇತ್ರದಲ್ಲಿ ನಾರಾಯಣಗೌಡ ಕೊಳಂಬೆ ಹಾಗೂ ಗಫೂರ್ ಸಾಹೇಬ್, ಕೊಕ್ಕಡ ಕ್ಷೇತ್ರ ಅನುಸೂಚಿತ ಜಾತಿ ಮೀಸಲಾತಿಯಿದ್ದು ಈಶ್ವರ ಭೈರ ಹಾಗೂ ಚಂದು ಎಲ್., ಕಣಿಯೂರು ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾತಿಯಿದ್ದು ಗಣೇಶ್ ಪ್ರಸಾದ್ ಎಂ.ಕೆ ಹಾಗೂ ಪುರಂದರಶೆಟ್ಟಿ, ಮಚ್ಚಿನ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು ಸಂತೋಷ್ ಕುಮಾರ್ ಹಾಗೂ ಜಯಾನಂದ, ಮಡಂತ್ಯಾರು ಕ್ಷೇತ್ರ ಮಹಿಳಾ ಮೀಸಲಾತಿಯಿದ್ದು ಸೆಲೆಸ್ಟಿನ್ ಡಿಸೋಜ ಹಾಗೂ ಸುಲೋಚನಾ, ವೇಣೂರು ಕ್ಷೇತ್ರ ಹಿಂದುಳಿದ ವರ್ಗ ಬಿ ಮೀಸಲಾತಿಯಿದ್ದು ಜಯರಾಮ ಶೆಟ್ಟಿ ಹಾಗೂ ಅಶೋಕ್ ಗೋವಿಯಸ್, ನಾರಾವಿ ಕ್ಷೇತ್ರ ಹಿಂದುಳಿದ ವರ್ಗ ಎ ಮೀಸಲಾತಿಯಿದ್ದು ಸತೀಶ್.ಕೆ ಹಾಗೂ ವಿಠಲ ಪೂಜಾರಿ, ಅಳದಂಗಡಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು ಚಿದಾನಂದ ಪೂಜಾರಿ ಹಾಗೂ ಭಾಸ್ಕರ ಸಾಲಿಯಾನ್, ಇದರೊಂದಿಗೆ ಕೃಷಿ ಮಾರುಕಟ್ಟೆ ಪ್ರದೇಶ ವರ್ತಕರ ಕ್ಷೇತ್ರದ ಒಂದು ಸ್ಥಾನಕ್ಕೆ ಪುಷ್ಪರಾಜ ಹೆಗ್ಡೆ ಹಾಗೂ ಚಂದ್ರಶೇಖರ ಗೌಡ ಅಂತಿಮ ಕಣದಲ್ಲಿದ್ದಾರೆ.







