ಸಿ.ಎಂ.ಇಬ್ರಾಹೀಂ ಕುಟುಂಬದ ಮೇಲೆ ಭ್ರೂಣಹತ್ಯೆ ಆರೋಪ

ಬೆಂಗಳೂರು, ಜ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಕುಟುಂಬದ ವಿರುದ್ಧ ಭ್ರೂಣಹತ್ಯೆ ಮಾಡಿಸಿರುವ ಆರೋಪ ಕೇಳಿಬಂದಿದೆ.
ಆರೋಪದ ಹಿನ್ನಲೆ:
ಏಳು ತಿಂಗಳ ಹಿಂದೆ ಸಿ.ಎಂ.ಇಬ್ರಾಹೀಂ ಅವರ ಪುತ್ರಿ ಇಫಾ(ಇಬ್ರಾಹೀಂ ಸಹೋದರನ ಪುತ್ರನ ಜೊತೆ) ಅಪ್ಪನ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗಿದ್ದರು. ಈಗ ನಾಲ್ಕುವರೆ ತಿಂಗಳ ಗರ್ಭಿಣಿಯಾಗಿರುವ ಮಗಳು(ಇಫಾ) ತವರು ಮನೆಗೆ ಬಂದಿದ್ದಾಗ, ಸಿ.ಎಂ.ಇಬ್ರಾಹೀಂ ಅವರು ಮಗಳಿಗೆ ಕುಡಿಯುವ ಜ್ಯೂಸ್‌ನಲ್ಲಿ ಗರ್ಭಪಾತದ ಮಾತ್ರೆ ಬೆರೆಸಿ ಕೊಟ್ಟಿರುವುದಾಗಿ ಸಿ.ಎಂ.ಇಬ್ರಾಹೀಂ ಸೋದರ ಸಿ.ಎಂ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಸಿ.ಎಂ.ಫೈಸಲ್ ಹಾಗೂ ಸಿ.ಎಂ. ಇಫಾ ಪ್ರೀತಿಸಿ ಮದುವೆಯಾಗಿದ್ದರು. ಸೋಮವಾರ ಮುಂಜಾನೆ ಸಿ.ಎಂ.ಇಬ್ರಾಹೀಂ ಹಾಗೂ ಪತ್ನಿ ಸೇರಿಕೊಂಡು ಇಫಾಗೆ ಹಣ್ಣಿನ ಜ್ಯೂಸ್ ಕೊಟ್ಟಿದ್ದರು. ಜ್ಯೂಸ್ ಕುಡಿದ ಬಳಿಕ ಇಫಾಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತದನಂತರ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾರೆಂದು ಸಿ.ಎಂ.ಖಾದರ್ ದೂರಿದರು.
ದೂರು:
ಭ್ರೂಣಹತ್ಯೆ ಪ್ರಕರಣದ ಅಡಿ ಸಿ.ಎಂ.ಇಬ್ರಾಹೀಂ ಸೇರಿ ಕುಟುಂಬಸ್ಥರ ಮೇಲೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಸಿ.ಎಂ.ಖಾದರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರೀತಿಗೆ ಇಬ್ರಾಹೀಂ ಅಡ್ಡಿ: ಖಾದರ್
‘ಮಗಳ ಪ್ರೇಮ ವಿವಾಹವನ್ನು ಸಿ.ಎಂ.ಇಬ್ರಾಹಿಂ ತೀವ್ರವಾಗಿ ವಿರೋಧಿಸಿದ್ದರು. ಹಾಗಾಗಿ ಅಸಮಾಧಾನದಿಂದ ಇರುವ ಇಬ್ರಾಹೀಂ ಬಲವಂತದಿಂದಲೇ ಮಗಳಿಗೆ ಗರ್ಭಪಾತ ಮಾಡಿಸಿದ್ದಾನೆ’
-ಸಿ.ಎಂ.ಖಾದರ್, ಸಿ.ಎಂ.ಇಬ್ರಾಹೀಂ ಸಹೋದರ







