ಗ್ರಾಮೀಣ ಪ್ರದೇಶಗಳಿಗೆ ಶೇ.40 ನೋಟುಗಳ ಪೂರೈಕೆಗೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ

ಮುಂಬೈ,ಜ.3: ನೋಟು ರದ್ದತಿಯ ಬಳಿಕ ನಗದು ಕೊರತೆಯನ್ನೆದುರಿಸುತ್ತಿರುವ ಬಡವರು ಮತ್ತು ಸಣ್ಣರೈತರ ಬವಣೆಯನ್ನು ನೀಗಿಸುವ ಪ್ರಯತ್ನವಾಗಿ ಆರ್‌ಬಿಐ ಕನಿಷ್ಠ ಶೇ.40ರಷ್ಟು ನೋಟುಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿತರಿಸುವಂತೆ ಬ್ಯಾಂಕುಗಳಿಗೆ ಇಂದು ನಿರ್ದೇಶ ನೀಡಿದೆ.
ಗ್ರಾಮೀಣ ಪ್ರದೇಶಗಳಿಗೆ ನೋಟುಗಳ ಪೂರೈಕೆಯು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿಲ್ಲ ಎನ್ನುವುದನ್ನು ಗಮನಿಸಿ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಗ್ರಾಮೀಣ ಪ್ರದೇಶಗಳಿಗೆ ಕನಿಷ್ಠ ಶೇ.40ರಷ್ಟು ನೋಟುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸದ್ಯ ದಾಸ್ತಾನು ಇರುವ 100 ರೂ.ಗಿಂತ ಕಡಿಮೆ ಮುಖಬೆಲೆಯ ನೋಟುಗಳ ಧಾರಾಳ ವಿತರಣೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಕರೆನ್ಸಿ ಚೆಸ್ಟ್‌ಗಳನ್ನು ನಿರ್ವಹಿಸುತ್ತಿರುವ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳ ಗ್ರಾಮೀಣ ಶಾಖೆಗಳು, ಗ್ರಾಮೀಣ ಪ್ರದೇಶಗಳಲ್ಲಿಯ ವೈಟ್ ಲೇಬಲ್ ಎಟಿಎಂಗಳು ಮತ್ತು ಅಂಚೆ ಕಚೇರಿಗಳಿಗೆ ಆದ್ಯತೆಯ ನೆಲೆಯಲ್ಲಿ ಹೊಸ ನೋಟುಗಳ ವಿತರಣೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕುಗಳು ತಮ್ಮ ಕರೆನ್ಸಿ ಚೆಸ್ಟ್‌ಗಳಿಗೆ ಸೂಚಿಸಬೇಕು ಎಂದು ಆರ್‌ಬಿಐ ತನ್ನ ನಿರ್ದೇಶದಲ್ಲಿ ತಿಳಿಸಿದೆ.





