ಇದು ಕೋಡಗನ ಕೋಳಿ ನುಂಗಿದ ಕಥೆಯಲ್ಲ!

ಹೊಸದಿಲ್ಲಿ: ಬಹುತೇಕ ಮಂದಿಗೆ ಬಹುಶಃ ಹಗಲಿನಲ್ಲಿ ಹಾವು ಕಾಣಿಸಿಕೊಂಡರೂ ಮೈ ಜುಮ್ಮೆನಿಸುತ್ತದೆ. ಹಾವೊಂದು ತನ್ನದೇ ಜಾತಿಯ ಮತ್ತೊಂದು ಹಾವನ್ನು ನುಂಗುವುದನ್ನು ಕಲ್ಪಿಸಿಕೊಳ್ಳಬಲ್ಲಿರಾ?
ಈ ಅಪೂರ್ವ ದೃಶ್ಯಾವಳಿಯ ವೀಡಿಯೊ ತುಣುಕು ಭಯಾನಕ ಶಬ್ದವನ್ನು ಒಳಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದದ್ದು ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳಿಗೆ ಹೆಸರಾಗಿರುವ ಆಸ್ಟ್ರೇಲಿಯಾದಲ್ಲಿ.
ಹಾವು ಹಿಡಿಯುವ ನಾರ್ಮನ್ ಹಾಗೂ ಸೆಲ್ಲಿ ಹಿಲ್ ಎಂಬವರು ಈ ಅಪರೂಪದ ದೃಶ್ಯ ಸೆರೆ ಹಿಡಿದಿದ್ದಾರೆ. ಅತ್ಯಂತ ವಿಷಕಾರಿಯಾದ ಪೌರಾತ್ಯ ಭಾಗದ ಕಂದು ಹಾವು, ಇನ್ನೊಂದು ಹೆಬ್ಬಾವನ್ನು ನುಂಗುವ ದೃಶ್ಯ ಮೈನವಿರೇಳಿಸುವಂತಿದೆ. ಇಬ್ಬರು ಹಾವಾಡಿಗರು ಇದನ್ನು ನೋಡುತ್ತಿದ್ದರೂ, ಅದನ್ನು ಏಕೆ ತಪ್ಪಿಸಲಿಲ್ಲ ಎನ್ನುವುದು ಕುತೂಹಲದ ಅಂಶ. ಈ ಕಂದು ಹಾವುಗಳು ಆಹಾರ ಸೇವಿಸುವ ವೇಳೆ ಅಡ್ಡಿಪಡಿಸಿದರೆ, ಅವು ತಮ್ಮ ಆಹಾರವನ್ನು ಕಕ್ಕುತ್ತವೆ. ಇದರಿಂದ ಯಾರಿಗೂ ಲಾಭವಿಲ್ಲ ಎಂಬ ಕಾರಣಕ್ಕೆ ಅಡ್ಡಿಪಡಿಸಿಲ್ಲ!
ಈ ಕಂದುಹಾವುಗಳು ವಿಶ್ವದ ಎರಡನೇ ಅತ್ಯಂತ ವಿಷಕಾರಿ ಹಾವು ಎಂಬ ಹೆಗ್ಗಳಿಕೆ ಹೊಂದಿವೆ. ಆಸ್ಟ್ರೇಲಿಯಾ ಮ್ಯೂಸಿಯಂನ ತಜ್ಞರು ಹೇಳುವಂತೆ ಈ ಹಾವುಗಳು ಪ್ರಾಣಿಭಕ್ಷಕ ಹಾವುಗಳಾಗಿದ್ದು, ಬಂಧಿಗಳಾಗಿದ್ದಾಗ ಹಾಗೂ ದಟ್ಟಣೆಯ ಸಂದರ್ಭದಲ್ಲಿ ಹೆಚ್ಚಾಗಿ ಇಂಥ ಸ್ವಭಾವ ಪ್ರದರ್ಶಿಸುತ್ತವೆ. ಇದು ಕಪ್ಪೆ, ಇತರ ಸರೀಸೃಪಗಳು, ಹಕ್ಕಿ ಹಾಗೂ ಸಸ್ತನಿಗಳನ್ನೂ ಸೇವಿಸುತ್ತವೆ.
ಇದು ಆಸ್ಟ್ರೇಲಿಯಾದಲ್ಲಿ ದೊಡ್ಡ ಸಂಖ್ಯೆಯ ಸಾವಿಗೂ ಕಾರಣವಾಗುತ್ತಿದೆ. ಸಾವುಗಳು ಹಾವಿನ ಕಡಿತದಿಂದ ಸಂಭವಿಸುತ್ತಿವೆ.







