ಮುಖ್ಯಮಂತ್ರಿ ಹುದ್ದೆಗೆ ಉತ್ತರ ಪ್ರದೇಶದ ಜನರ ಆಯ್ಕೆ ಯಾರು ?
ಮೊದಲ ಸಮೀಕ್ಷೆಯ ಫಲಿತಾಂಶದಲ್ಲಿ ಬಿಜೆಪಿಗೆ ಕಹಿ ಸುದ್ದಿ

ಲಕ್ನೋ, ಜ. 3 : ಉತ್ತರ ಪ್ರದೇಶದಲ್ಲಿ ಮತದಾರರ ಸಮೀಕ್ಷೆಯ ಪರ್ವ ಪ್ರಾರಂಭವಾಗಿದೆ. ಎಬಿಪಿ ನ್ಯೂಸ್ ನಡೆಸಿದ ಸರ್ವೆಯಲ್ಲಿ ಅಖಿಲೇಶ್ ಯಾದವ್ ರಾಜ್ಯದ ಜನತೆಯ ಅತ್ಯಂತ ನೆಚ್ಚಿನ ನಾಯಕನಾಗಿ ಮೂಡಿಬಂದಿದ್ದಾರೆ.
ಸಿಎಂ ಹುದ್ದೆಗೆ ಎರಡನೇ ಸ್ಥಾನದಲ್ಲಿ ಮಾಯಾವತಿ ಇದ್ದಾರೆ. ಅಖಿಲೇಶ್ 28, ಮಾಯಾವತಿ 21 , ಬಿಜೆಪಿಯ ಯೋಗಿ ಆದಿತ್ಯನಾಥ್ 4 ಹಾಗು ಮುಲಾಯಂ ಸಿಂಗ್ ಯಾದವ್ 3 ಶೇಕಡಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚುನಾವಣೆಯ ಹೊಸ್ತಿಲಲ್ಲಿ ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದ ಮಂಕಾಗಿರುವ ಅಖಿಲೇಶ್ ಮುಖದಲ್ಲಿ ಈ ಸರ್ವೆಯ ಫಲಿತಾಂಶ ಮುಗುಳ್ನಗು ತರುವುದು ಖಚಿತ. ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಪಡೆದೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಹಾಗು ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಸುದ್ದಿ.
ಹಾಗೆಯೇ ಈ ಬಾರಿ ಗೆದ್ದು ಮತ್ತೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವ ಅನಿವಾರ್ಯತೆ ಇರುವ ಬಿಎಸ್ಪಿ ಹಾಗು ಮಾಯಾವತಿ ಅವರು ಈ ಸಮೀಕ್ಷೆಯಿಂದ ಖುಷಿಯಾಗಲು ಸಾಧ್ಯವಿಲ್ಲ. ಇದು ಆರಂಭ ಮಾತ್ರ. ಇನ್ನು ಇಂತಹ ಹಲವಾರು ಸಮೀಕ್ಷೆಗಳು, ಸರ್ವೇಗಳು ಬರಲಿಕ್ಕಿವೆ.
ಸರ್ವೆಯಲ್ಲಿ ಭಾಗವಹಿಸಿದ 34% ಮಂದಿ ಅಖಿಲೇಶ್ ಕಾರ್ಯ ವೈಖರಿಯಿಂದ ಸಂತೃಪ್ತರು ಎಂದಿದ್ದರೆ 32% ಮಂದಿ ಮೋದಿ ಕಾರ್ಯವೈಖರಿಗೆ ಜೈ ಎಂದಿದ್ದಾರೆ. ಸಮಾಜವಾದಿ ಪಕ್ಷದ ಜಗಳಕ್ಕೆ ಸರ್ವೆಯಲ್ಲಿ ಪಾಲ್ಗೊಂಡ 25% ಜನರ ಪ್ರಕಾರ ಶಿವಪಾಲ್ ಯಾದವ್ ಕಾರಣ. 6% ಮಂದಿ ಮಾತ್ರ ಇದಕ್ಕೆ ಅಖಿಲೇಶ್ ರನ್ನು ದೂರಿದ್ದಾರೆ. ಈ ಸರ್ವೇ ಎಸ್ಪಿಯ ಜಗಳ ತಾರಕಕ್ಕೆ ಏರುವ ಮೊದಲು ನಡೆಸಲಾಗಿತ್ತು.







