ನಳಿನ್ ಕುಮಾರ್ ಕಟೀಲ್ ಪ್ರಚೋದನಕಾರಿ ಭಾಷಣದ ವಿರುದ್ದ ಎಸ್‌ಡಿಪಿಐ ಪ್ರತಿಭಟನೆ

ಕೊಣಾಜೆ , ಜ.3 : ಕಾರ್ತಿಕ್‌ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕೊಣಾಜೆ ಠಾಣೆಯೆದುರು ಹಿಂದೂ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ದ ಎಂದು ಹೇಳಿ ಜಿಲ್ಲೆಯಲ್ಲಿ ಕೋಮುದ್ವೇಷವನ್ನು ಹರಡಿಸುವ ಮೂಲಕ ಸೌರ್ಹಾರ್ದತೆಯನ್ನು ಕದಡುವ ಕೆಲಸ ಮಾಡಿದ್ದು, ಕೂಡಲೇ ನಳಿನ್ ಕುಮಾರ್ ಅವರ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಕೊಣಾಜೆ ಠಾಣೆಯೆದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಹಿಂದೆ ಪ್ರಭಾಕರ ಭಟ್ ಪ್ರಚೋದನಕಾರಿ ಭಾಷಣ ಮಾಡಿದರು, ಇಂದು ನಳಿನ್ ಕುಮಾರ್ ಪ್ರಚೋದನಕಾರಿಯಾಗಿ ಮಾತನಾಡಿದ್ದು, ಈವರೆಗೂ ನೀಚ ಕಾಂಗ್ರೆಸ್ ಸರಕಾರಕ್ಕೆ ಕೇಸು ದಾಖಲಿಸಿ ಇವರನ್ನು ಜೈಲಿಗೆ ಅಟ್ಟಲು ಸಾದ್ಯವಾಗಿಲ್ಲ ಎಂದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ, ಪೊಲೀಸರು ನ್ಯಾಯ ಸಮ್ಮತವಾಗಿ ತನಿಖೆ ನಡೆಸುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ನಿರಪರಾಧಿಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಿದರೆ ಕಾರ್ತಿಕ್ ರಾಜ್ ಕುಟುಂಬಕ್ಕೆ ಆದ ನೋವಿನಷ್ಟೇ ನೋವು ಆ ನಿರಪರಾಧಿಯ ಮನೆಯವರಿಗೂ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚಿಂತನೆ ಒಂದೇ ಆಗಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಪ್ರಚೋದನಕಾರಿ ಭಾಷಣದಂತೆ ರಮಾನಾಥ ರೈ ಅವರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ನಳಿನ್ ಕುಮಾರ್ ಕಟೀಲು ಭಾಗವಹಿಸಿದ್ದ ಸಭೆಯಲ್ಲಿ ಕಾಂಗ್ರೆಸ್‌ನ ಪುಡಾರಿಗಳು ಭಾಗವಹಿಸುವ ಮೂಲಕ ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಈ ಹಿಂದೆ ಸುಳ್ಯದಲ್ಲಿಯೂ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದೀಗ ಹಿಂದೂ ಸಮಾಜದ ಬಾಂಧವರು ಬಿಜೆಪಿಯಿಂದ ದೂರವಾಗುತ್ತಿದ್ದು , ಅವರನ್ನು ಓಲೈಸಲು ಇಂತಹ ಜಿಲ್ಲೆಯನ್ನು ಉರಿಸುವಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದರು.
ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ್, ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಲತೀಫ್ ಕೋಡಿಜಾಲ್, ಕಾರ್ಯದರ್ಶಿ ಹಾರಿಸ್ ಮಲಾರ್, ಸದಸ್ಯ ನೌಷದ್ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು.







