ಕಳ್ಳತನ ಪ್ರಕರಣ: ಆರೋಪಿ ಬಂಧನ, ಸೊತ್ತು ವಶ

ಮಂಗಳೂರು, ಜ. 3: ಮೂರು ವರ್ಷಗಳ ಹಿಂದೆ ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯೋರ್ವನನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಕಳವಾದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪದಕನದೂರು ಮನೆ ನಿವಾಸಿ ವಿಘ್ನೇಶ್ ಜೋಗಿ (26) ಬಂಧಿತ ಆರೋಪಿ.
ಈತನನ್ನು ಇಂದು ಬೆಳಗ್ಗೆ ಚಿನ್ನಾಭರಣ ಮಾರಾಟ ಮಾಡಲು ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಸಂದರ್ಭದಲ್ಲಿ ರೂಪವಾಣಿ ಟಾಕೀಸ್ ಬಳಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈತನ ವಶದಿಂದ ಚಿನ್ನದ ನೆಕ್ಲೆಸ್ ಸರ-1, ಚಿನ್ನದ ಕರಿಮಣಿ ಸರ -1, ಚಿನ್ನದ ಬಳೆಗಳು-3, 2 ಜೊತೆ ಚಿನ್ನದ ಕಿವಿಯ ಆಭರಣಗಳು, ಉಂಗುರ, ಚಿನ್ನದ ಚೈನ್-1 ಹೀಗೆ ಒಟ್ಟು 114 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ ರೂ. 3,17,700 ಆಗಿದೆ.. ಆರೋಪಿ ವಿಘ್ನೇಶ್ ಜೋಗಿ ಹಾಗೂ ಆತನು ಕಳ್ಳತನ ನಡೆಸಿದ ಮೇಲ್ಕಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
2013ರ ಡಿ.12ರಂದು ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳುವಾಯಿ ಗ್ರಾಮದ ಮೂಡಾಯಿಕಾಡು ನಿವಾಸಿ ವಲೇರಿಯನ್ ಅರನ್ನಾ ಎಂಬವರು ಬೆಳಗ್ಗೆ 8:45ಕ್ಕೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಮಧ್ಯಾಹ್ನ 2:30ಕ್ಕೆ ವಾಪಾಸು ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನು ಒಡೆಯಲಾಗಿತ್ತು. ಒಳಗೆ ಪ್ರವೇಶಿಸಿ ಮನೆಯ ಎದುರು ರೂಮಿನ ಗೋದ್ರೇಜ್‌ನ ಸೇಫ್ ಲಾಕರ್‌ನು ನೋಡಿದಾಗ ಅದರಲ್ಲಿದ್ದ ಚಿನ್ನಾಭರಣಗಳು ಕಳವಾಗಿದ್ದವು. ಈ ಬಗ್ಗೆ ವಲೇರಿಯನ್ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ. ನಾಯಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.







