ಕೃಷಿಗೆ ಸ್ವರ್ಣ ನದಿಯ ನೀರು ಬಳಕೆಗೆ ನಿಷೇಧದ ಆದೇಶದ ವಿರುದ್ಧ ಕೃಷಿಕರಿಂದ ಹೋರಾಟಕ್ಕೆ ಸಜ್ಜು

ಉಡುಪಿ, ಜ.3: ಹಿರಿಯಡ್ಕ ಸಮೀಪದ ಸ್ವರ್ಣ ನದಿಯ ಬಜೆ ಅಣೆಕಟ್ಟಿನ ಹಿನ್ನೀರಿನ ಭಾಗದಲ್ಲಿರುವ ರೈತರು ತಮ್ಮ ಕೃಷಿಗಳಿಗೆ ನದಿನೀರನ್ನು ಬಳಸುವುದನ್ನು ನಿಷೇಧಿಸಿ ಮತ್ತು ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಿ ಜ.1ರಿಂದ ಅನ್ವಯವಾಗುವಂತೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ತೀವ್ರವಾಗಿ ಆಕ್ಷೇಪಿಸಿರುವ ಸ್ಥಳೀಯ ರೈತರು, ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಬಜೆ ಅಣೆಕಟ್ಟಿನಿಂದ ಶಿರೂರು ಅಣೆಕಟ್ಟಿನವರೆಗೆ ಸುಮಾರು ಆರು ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 68 ಕುಟುಂಬಗಳ 620 ಮಂದಿ ನೇರವಾಗಿ ಹಾಗೂ 306 ಮಂದಿ ಪರೋಕ್ಷವಾಗಿ ಸ್ವರ್ಣ ನದಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಉಪಯೋಗ ಮಾಡುತ್ತಿದ್ದಾರೆ. ನದಿಯ ಬಲ ದಂಡೆ ಯಲ್ಲಿ 27 ಮತ್ತು ಎಡ ದಂಡೆಯಲ್ಲಿ 41 ಸೇರಿದಂತೆ ಒಟ್ಟು 68 ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಒಟ್ಟು ಅಶ್ವಶಕ್ತಿ ಸಾಮರ್ಥ್ಯ 359ಎಚ್‌ಪಿ.
ಇಲ್ಲಿ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಉಪಯೋಗಿಸಿ ತೆಂಗು, ಅಡಿಕೆ, ಬಾಳೆ, ಭತ್ತ, ತರಕಾರಿಯನ್ನು ಬೆಳೆಸಲಾಗುತ್ತಿದೆ. ಪ್ರಸ್ತುತ ಈ ಪ್ರದೇಶ ದಲ್ಲಿ 11769 ತೆಂಗಿನ ಮರಗಳು, 44639 ಅಡಿಕೆ ಮರಗಳು, 17850 ಬಾಳೆ ಗಿಡಗಳಿದ್ದು, 180.80 ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 6.37 ಎಕರೆ ಪ್ರದೇಶದಲ್ಲಿ ತರಕಾರಿಯನ್ನು ಬೆಳೆಸಲಾಗುತ್ತಿದೆ. ‘ಈ ಅಂಕಿ ಅಂಶಗಳನ್ನು ರೈತರನ್ನು ಖುದ್ಧಾಗಿ ಭೇಟಿಯಾಗಿ ಸಂಗ್ರಹಿಸಲಾಗಿದ್ದು, ಇಲ್ಲಿನ ರೈತರು ಕುಡಿಯುವ ನೀರಿಗಾಗಿ ಮತ್ತು ದಿನನಿತ್ಯದ ಉಪ ಯೋಗಕ್ಕಾಗಿ ಪಂಪೆಸೆಟ್ ನೀರನ್ನೇ ಬಳಸುತ್ತಿದ್ದಾರೆ. ಈ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಿದರೆ ರೈತರು ಬದಲಿ ವ್ಯವಸ್ಥೆ ಇಲ್ಲದೆ ದಿನ ನಿತ್ಯದ ಬಳಕೆ ಮತ್ತು ಕೃಷಿ ನೀರಿಗೆ ತೀರಾ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಬಜೆ ಅಣೆಕಟ್ಟು ಪ್ರದೇಶಕ್ಕೆ ತೆರಳಿದ್ದ ಮಾಧ್ಯಮದವರೆಗೆ ಮಾಹಿತಿ ನೀಡಿದರು.
20 ಪಂಪ್‌ಸೆಟ್ ವಿದ್ಯುತ್ ಕಡಿತ:
ಕಳೆದ ವರ್ಷ ನದಿ ನೀರು ಬಳಸದಂತೆ ಕೃಷಿಕರಿಗೆ ಎ.1ಕ್ಕೆ ನಿಷೇಧ ಹೇರಿದ್ದು, ಈ ವರ್ಷ ಮೂರು ತಿಂಗಳು ಮೊದಲೇ ಈ ಆದೇಶ ಹೊರಡಿಸಲಾಗಿದೆ. ಇದರ ಪರಿಣಾಮ ಪೆರ್ಡೂರು ವ್ಯಾಪ್ತಿಯ ಸುಮಾರು 20 ರೈತರ ಪಂಪ್‌ಸೆಟ್‌ಗಳನ್ನು ಈಗಾಗಲೇ ಕಡಿತಗೊಳಿಸಲಾಗಿದೆ.
‘ಯಾವುದೇ ಮುನ್ಸೂಚನೆ ನೀಡದೆ ನೀರು ಬಳಕೆ ನಿಷೇಧಿಸಿ ಹೊರಡಿಸಿ ರುವ ಆದೇಶವು ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ಪ್ರದೇಶದ ಸಣ್ಣ ಮತ್ತು ಅತಿ ಸಣ್ಣ ರೈತರುಗಳ ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ. ಇಲ್ಲಿ 5-6 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳದಿದ್ದು, ಫೆಬ್ರವರಿ- ಮಾರ್ಚ್‌ನಲ್ಲಿ ಕಟಾವಿಗೆ ಬರಲಿದೆ. ಈಗಲೇ ನೀರಿನ ನಿಷೇಧ ಮಾಡಿದರೆ ಈ ಕೃಷಿಕರಿಗೆ ಆತ್ಮಹತ್ಯೆಯೊಂದೇ ದಾರಿಯಾಗಬಹುದು’ ಎಂದು ಸಂಘದ ಅಧ್ಯಕ್ಷ ರಾಮ ಕೃಷ್ಣ ಶರ್ಮ ಬಂಟಕಲ್ ಟೀಕಿಸಿದ್ದಾರೆ.
‘ಈ ಪ್ರದೇಶದ ರೈತರು ಫ್ರೆಬವರಿ ತಿಂಗಳಿನಿಂದ ಜೂನ್ ತನಕ ತಮ್ಮ ಪಂಪ್‌ಸೆಟ್‌ನ್ನು ಭತ್ತಕ್ಕಿಂತ ಹೆಚ್ಚಾಗಿ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ಉಪಯೋಗಿಸುತ್ತಿದ್ದು, ಈ ಮೂರು ಕೃಷಿಗಳಿಗೆ ಬಹಳ ಪ್ರಮಾಣದ ನೀರು ಬೇಕಾಗಿಲ್ಲ. ಕೇವಲ ತೇವಾಂಶ ಮಾತ್ರ ಇದ್ದರೆ ಸಾಕಾಗುತ್ತದೆ. ಇಲ್ಲಿನ ರೈತರು ಭೂಅಡಮಾನ, ವಾಣಿಜ್ಯ ಬ್ಯಾಂಕ್‌ಗಳಿಂದ ಸುಮಾರು 2.21ಕೋಟಿ ರೂ. ಹಣವನ್ನು ಕೃಷಿಯಲ್ಲಿ ತೊಡಗಿಸಿದ್ದು, ಇದರಲ್ಲಿ 1.07ಕೋಟಿ ರೂ. ಸಾಲದ ರೂಪದಲ್ಲಿ ಪಡೆದಿದ್ದಾರೆ. ಅದನ್ನು ಈ ಕೃಷಿಯಿಂದ ಸಿಗುವ ಉತ್ಪತ್ತಿಯಿಂದಲೇ ಮರುಪಾವತಿಸಬೇಕಾಗಿದೆ’ ಎನ್ನುತ್ತಾರೆ ಮುಂಡುಜೆಯ ಕೃಷಿಕ ಪ್ರಸನ್ನ.
ಇಲ್ಲಿ ಪ್ರತಿದಿನ ನಗರಸಭೆಯಿಂದ 350ಎಚ್‌ಪಿ ಹಾಗೂ ಮಣಿಪಾಲ ವಿವಿ ಯವರು 150ಎಚ್‌ಪಿಯಷ್ಟು ನೀರನ್ನು ಲಿಫ್ಟ್ ಮಾಡುತ್ತಾರೆ. ಪ್ರಸ್ತುತ ನಗರ ಸಭೆಗೆ ಯಾವುದೇ ನಿರ್ಬಂಧ ಇಲ್ಲದೆ ನೀರಿನ ಬಳಕೆಯ ಪ್ರದೇಶಗಳನ್ನು ವಿಸ್ತರಿಸುತ್ತ ಹೋಗುತ್ತಿದೆ. ಈ ನೀರನ್ನು ಕುಡಿಯಲು ಮಾತ್ರವಲ್ಲದೆ ವಾಹನ ತೊಳೆಯಲು, ಯಂತ್ರೋಪಕರಣ, ಕಟ್ಟಡ ಕಾಮಗಾರಿಗಳಿಗೂ ಬಳಸಲಾಗುತ್ತಿದೆ. ಇವರಿಗೆ ಇಲ್ಲದ ನಿರ್ಬಂಧ ಕೃಷಿರಿಗೆ ಮಾತ್ರ ಹೇರುವುದು ಸರಿಯಲ್ಲ ಎಂದು ಕೃಷಿಕ ಮಣೈ ಸರ್ವೋತ್ತಮ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೇಡಿಕೆಗಳು
ಪ್ರಸ್ತುತ ಕೃಷಿಕರ ನೀರಿನ ಬಳಕೆ ನಿಷೇಧವನ್ನು ಹಿಂಪಡೆಯಬೇಕು ಮತ್ತು ಇಲ್ಲಿನ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್ ಸಂಪರ್ಕ ಒದಗಿಸಿ ವಾರಕ್ಕೆ ಮೂರು ಅಥವಾ ಎರಡು ದಿನ ನೀರು ತೆಗೆಯಲು ಅವಕಾಶ ನೀಡಬೇಕು. ಕೃಷಿ ನೀರಿನ ನಿರ್ವಹಣೆಗಾಗಿ ಕೃಷಿಕರು, ಮೆಸ್ಕಾಂ, ಜಿಲ್ಲಾಡಳಿತ ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಕೃಷಿಕ ಸಂಘ ಆಗ್ರಹಿಸಿದೆ.







