ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳ ಘಟನೆಗೆ ವಿವಾದಾತ್ಮಕ ಪ್ರತಿಕ್ರಿಯೆ : ಪರಮೇಶ್ವರ್, ಅಬು ಅಝ್ಮಿಗೆ ಸಮನ್ಸ್

ಹೊಸದಿಲ್ಲಿ, ಜ.3: ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಬು ಅಝ್ಮಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ಜಾರಿಮಾಡಿದೆ.
ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೇ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದರೆ ಹೇಗೆ. ದೇಶದ ಎಲ್ಲಾ ಪುರುಷರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ಆದರೆ ಶೇ.25ರಷ್ಟು ಪುರುಷರು ಯಜಮಾನ ಪದ್ದತಿಯ ಪ್ರತಿಪಾದಕರಾಗಿದ್ದು ಮಹಿಳೆಯರ ಬಗ್ಗೆ ಇವರಲ್ಲಿ ಗೌರವದ ಭಾವನೆಗಳಿಲ್ಲ ಎಂದು ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಹೇಳಿದ್ದಾರೆ.
ಯುವಜನತೆಯ ಪಾಶ್ಚಾತ್ಯರ ರೀತಿಯ ವರ್ತನೆ ಈ ಘಟನೆಗೆ ಕಾರಣ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದರು. ಘಟನೆಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಲಲಿತಾ ಕುಮಾರಮಂಗಳಂ, ಡಿಜಿಪಿ, ಸಿಟಿ ಪೊಲೀಸ್ ಆಯುಕ್ತರು ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕಾಧ್ಯಕ್ಷ ಅಬು ಆಝ್ಮಿ, ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ ಯುವತಿಯರ ರಕ್ಷಣೆ ಪೊಲೀಸರ ಕರ್ತವ್ಯವಾಗಿದ್ದರೂ, ಮನೆಯಿಂದಲೇ ರಕ್ಷಣೆ ಆರಂಭ ಎಂಬುದನ್ನು ಮಹಿಳೆಯರು ಮರೆಯಬಾರದು. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಾ ಅರೆ ಬಟ್ಟೆ ತೊಟ್ಟುಕೊಂಡು ನಡುರಾತ್ರಿವರೆಗೆ ಪಾರ್ಟಿ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಅರೆಬರೆ ಬಟ್ಟೆ ತೊಟ್ಟುಕೊಂಡು ಯುವತಿಯರು ತಮ್ಮ ಸ್ನೇಹಿತರೊಂದಿಗೆ ತಡರಾತ್ರಿ ಬೀದಿಗಿಳಿದರೆ ಇಂತಹ ಘಟನೆ ಆಗದಿರುತ್ತದೆಯೇ ಎಂದು ಪ್ರಶ್ನಿಸಿದ್ದರು.







