ಸರತಿ ಸಾಲಲ್ಲಿ ನಿಂತ ಜನರನ್ನು ತಮಾಷೆ ಮಾಡಿದ ಬಿಜೆಪಿ ಸಂಸದ ತಿವಾರಿ !
ವೀಡಿಯೊ ನೋಡಿ

ಹೊಸದಿಲ್ಲಿ, ಜ. 3 : ನೋಟು ರದ್ದತಿಯಿಂದ ಜನರು ಸಂಕಷ್ಟ ಎದುರಿಸುವುದು ಕಡಿಮೆಯಾಗುತ್ತಿಲ್ಲ. ಅದರ ಜೊತೆಗೆ ಜನಪ್ರತಿನಿಧಿಗಳ ಉಡಾಫೆಯ ವರ್ತನೆಯೂ ಮುಂದುವರಿಯುತ್ತಿದೆ.
ಸಂಸದ ಹಾಗು ದಿಲ್ಲಿ ಬಿಜೆಪಿಯ ನೂತನ ಅಧ್ಯಕ್ಷ ಮನೋಜ್ ತಿವಾರಿ ನೋಟು ರದ್ದತಿ ಬಳಿಕ ಬ್ಯಾಂಕ್ , ಎಟಿಎಂ ಗಳೆದುರು ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರುವ ಜನರನ್ನು ಪರೋಕ್ಷವಾಗಿ ಲೇವಡಿ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.
ಅವರು ಜನರನ್ನು ತಮಾಷೆ ಮಾಡುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇಶಪ್ರೇಮದ ಹೆಸರಲ್ಲಿ ಜನರನ್ನು ಈ ರೀತಿ ಎಷ್ಟು ಬೇಕಾದರೂ ನಿಲ್ಲಿಸಬಹುದು ಎಂಬ ಧಾಟಿಯಲ್ಲಿ ತಿವಾರಿ ಮಾತನಾಡಿರುವುದು ಹಾಗು ವ್ಯಂಗ್ಯವಾಗಿ ನಕ್ಕಿರುವುದು ಈ ವೀಡಿಯೋದಲ್ಲಿ ಕಾಣುತ್ತದೆ.
ಸಾಲದ್ದಕ್ಕೆ ಅವರ ಜೊತೆ ಕುಳಿತಿದ್ದ ಬಿಜೆಪಿಯ ಇತರ ಮುಖಂಡರೂ ತಿವಾರಿಯ ಈ ತಮಾಷೆಗೆ ಸಾಥ್ ನೀಡಿ ನಕ್ಕು, ಮೇಜು ಕುಟ್ಟಿ ಪ್ರೋತ್ಸಾಹಿಸಿದ್ದಾರೆ.
ಸರತಿ ಸಾಲಲ್ಲಿ ನಿಂತ ಜನರನ್ನು ಖುಷಿ ಪಡಿಸಲು ನಾನು ಅಲ್ಲೇ ಒಂದು ಹಾಡು ರೆಡಿ ಮಾಡಿ ಹಾಡಿಬಿಟ್ಟೆ. ಅದನ್ನು ಕೇಳಿ ಜನ ಖುಷಿಯಾಗಿ ಇನ್ನೂ ನಿಲ್ಲುತ್ತೇವೆ ಎಂದು ಹೇಳಿದರು ಎಂದು ಹೇಳುವಾಗ ತಿವಾರಿಗೆ ನಗು ತಡೆಯಲು ಸಾಧ್ಯಗುತ್ತಿರಲಿಲ್ಲ.







