ಯುವತಿಯ ಮಾನಭಂಗ: ಆರೋಪಿ ಸೆರೆ
ಪುತ್ತೂರು , ಜ. 3 : ಅವಿವಾಹಿತ ಯುವತಿಯೊಬ್ಬಳನ್ನು ನಂಬಿಸಿ, ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿವಾಹಿತ ವ್ಯಕ್ತಿಯೊಬ್ಬನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಮಾರ ದೇವಾಡಿಗ (41) ಬಂಧಿತ ಆರೋಪಿ.
ಈತ ಪುತ್ತೂರು ತಾಲೂಕಿನ ಪಾಣಾಜೆ ಎಂಬಲ್ಲಿನ ನಿವಾಸಿ ಪ್ರಸ್ತುತ ಪುತ್ತೂರು ನಗರದ ಕಲ್ಲಾರೆ ಬಳಿ ಮನೆಯೊಂದರಲ್ಲಿ ಕೆಲಸ ಮಾಡುವ ಯುವತಿಯ ಮೇಲೆ ಅತ್ಯಾಚಾರ ಮಾಡಿರುವುದಾಗಿ ಆಪಾದಿಸಲಾಗಿದೆ.
ಆರೋಪಿಯು ಸೋಮವಾರ ಮಹಿಳೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತಿತರ ಕಡೆ ಸುತ್ತಾಡಿಸಿದ್ದು, ಹಿಂದಿರುಗಿ ಬರುವಾರ ಪುತ್ತೂರು ಹೊರವಲಯದ ಪಡ್ನೂರು ಗ್ರಾಮದ ಹಳ್ಳಿಯೊಂದರಲ್ಲಿ ಬೈಕ್ ನಿಲ್ಲಿಸಿ ಆಕೆಯನ್ನು ಪುಸಲಾಯಿಸಿ ಪಕ್ಕದ ಗುಡ್ಡ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಆಪಾದಿಸಲಾಗಿದೆ.
ಮಂಗಳವಾರ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಮದುವೆಯಾಗಿ 3 ಮಕ್ಕಳ ತಂದೆಯಾಗಿರುವ ಆರೋಪಿಯು, ಪರಿಶಿಷ್ಟ ಪಂಗಡಕ್ಕೆ ಸೇರಿದ ಈಕೆಯನ್ನು ಬೆದರಿಸಿ ಅಪಹರಣ ಮಾಡಿ ಅತ್ಯಾಚಾರ ಮಾಡಿರುವ ಕಾರಣ ಈತನ ಮೇಲೆ ಅಪಹರಣ, ಬೆದರಿಕೆ, ದಲಿತ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ.





