ಬ್ರೆಝಿಲ್ ಜೈಲ್‌ನಲ್ಲಿ ಭೀಕರ ಕಾಳಗ : 56 ಮಂದಿಯ ತಲೆ ಕಡಿದ ಎದುರಾಳಿ ಗುಂಪು

ಮನೌಸ್ (ಬ್ರೆಝಿಲ್), ಜ. 3: ಬ್ರೆಝಿಲ್‌ನ ಜೈಲೊಂದರಲ್ಲಿ ಎರಡು ವಿರೋಧಿ ಗುಂಪುಗಳ ನಡುವೆ ಭೀಕರ ಕಾಳಗ ನಡೆದಿದ್ದು, ದಾಂಧಲೆಕೋರರು ತಮ್ಮ ಎದುರಾಳಿಗಳ ತಲೆ ಕಡಿದು ಕೊಂದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಕಾಳಗದಲ್ಲಿ 56 ಮಂದಿ ಮೃತಪಟ್ಟಿದ್ದಾರೆ ಹಾಗೂ 144 ಕೈದಿಗಳು ತಪ್ಪಿಸಿಕೊಂಡಿದ್ದಾರೆ.
ಬ್ರೆಝಿಲ್‌ನ ಅಮರೆನಸ್ ರಾಜ್ಯದ ರಾಜಧಾನಿ ಮನೌಸ್‌ನ ಹೊರವಲಯದಲ್ಲಿರುವ ಜೈಲೊಂದರಲ್ಲಿ ರವಿವಾರ ಮಧ್ಯಾಹ್ನದ ಸುಮಾರಿಗೆ ಹಿಂಸಾಚಾರ ಸ್ಫೋಟಗೊಂಡಿತು ಹಾಗೂ ರಾತ್ರಿಯಿಡೀ ಮುಂದುವರಿಯಿತು ಎಂದು ರಾಜ್ಯದ ಸಾರ್ವಜನಿಕ ಸುರಕ್ಷತೆ ಕಾರ್ಯದರ್ಶಿ ಸರ್ಗಿಯೊ ಫೋಂಟ್ಸ್ ಹೇಳಿದರು.
ರಕ್ತಸಿಕ್ತ ಹಾಗೂ ಸುಟ್ಟ ದೇಹಗಳನ್ನು ಜೈಲಿನ ಆವರಣದಲ್ಲಿ ರಾಶಿ ಹಾಕಲಾಗಿದೆ ಎಂದು ಸ್ಥಳದಲ್ಲಿರುವ ಎಎಫ್‌ಪಿ ಛಾಯಾಗ್ರಾಹಕರೊಬ್ಬರು ತಿಳಿಸಿದರು.
ಮೊದಲು 60 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಗಿತ್ತು. ಬಳಿಕ, ಅಧಿಕಾರಿಗಳು ಅದನ್ನು ಪರಿಷ್ಕರಿಸಿ 56ಕ್ಕೆ ಇಳಿಸಿದರು.
ಇದು ಕಳೆದ ಒಂದು ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಿ ನಡೆದ ಅತ್ಯಂತ ಭೀಕರ ಜೈಲು ಕಾಳಗವಾಗಿದೆ.
ಜೈಲು ಆವರಣದಲ್ಲಿ ಪತ್ತೆಹಚ್ಚಲಾದ ವಿವಿಧ ಸುರಂಗ ಮಾರ್ಗಗಳ ಮೂಲಕ ನಾಪತ್ತೆಯಾದ ಡಝನ್‌ಗಟ್ಟಳೆ ಕೈದಿಗಳಿಗಾಗಿ ಭಾರೀ ಶಸ್ತ್ರಸಜ್ಜಿತ ಪೊಲೀಸರು ಬೇಟೆಯಾಡುತ್ತಿದ್ದಾರೆ.
ಜೈಲಿನಿಂದ 112 ಕೈದಿಗಳು ಮತ್ತು ಸಮೀಪದ ಆಂಟೋನಿಯೊ ಟ್ರಿನ್‌ಡಾಡ್ ಪೆನಾಲ್ ಇನ್‌ಸ್ಟಿಟ್ಯೂಟ್‌ನಿಂದ 72 ಮಂದಿ ಪರಾರಿಯಾಗಿದ್ದಾರೆ ಎಂಬುದಾಗಿ ಫೋಂಟ್ ಅವರ ಕಚೇರಿ ಹೇಳಿದೆ. ಅವರ ಪೈಕಿ 40 ಮಂದಿಯನ್ನು ಮರುಬಂಧಿಸಲಾಗಿದೆ.
ಕಾವಲುಗಾರರ ಒತ್ತೆಸೆರೆ
ಸೋಮವಾರ ಬೆಳಗ್ಗಿನ ವೇಳೆಗಷ್ಟೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರಿಗೆ ಸಾಧ್ಯವಾಯಿತು. ಕೈದಿಗಳು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಜೈಲಿನ 12 ಕಾವಲುಗಾರರನ್ನು ಪೊಲೀಸರು ಬಳಿಕ ಬಂಧಮುಕ್ತಗೊಳಿಸಿದರು.
ಜೈಲಿನ ಒಳಗೆ ಭೀಭತ್ಸ ಪರಿಸ್ಥಿತಿ ನೆಲೆಸಿತ್ತು.
‘‘ಹೆಚ್ಚಿನ ಬಲಿಪಶುಗಳ ತಲೆ ಕಡಿಯಲಾಗಿತ್ತು ಹಾಗೂ ಅವರೆಲ್ಲರಿಗೂ ಚಿತ್ರಹಿಂಸೆ ನೀಡಲಾಗಿತ್ತು’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋಂಟ್ ತಿಳಿಸಿದರು.
ಬ್ರೆಝಿಲ್‌ನ ಅತ್ಯಂತ ದೊಡ್ಡ ಗ್ಯಾಂಗ್‌ಗಳ ಪೈಕಿ ಒಂದಾಗಿರುವ ಫಸ್ಟ್ ಕ್ಯಾಪಿಟಲ್ ಕಮಾಂಡ್‌ಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಸ್ಥಳೀಯ ಗ್ಯಾಂಗ್ ಫ್ಯಾಮಿಲಿ ಆಫ್ ದ ನಾರ್ತ್ ಈ ಕೃತ್ಯ ಎಸಗಿದೆ ಎಂದು ಅವರು ಹೇಳಿದರು.







