ಮಹದೇವ ಪ್ರಸಾದ್ ನಿಧನಕ್ಕೆ ಗಣ್ಯರ ಸಂತಾಪ

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಚಿಕ್ಕಮಗಳೂರು, ಜ.3: ಸಚಿವ ಮಹದೇವ ಪ್ರಸಾದ್ ಅವರ ನಿಧನಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಹೃದಯ, ಕ್ರಿಯಾಶೀಲ, ಸರಳ, ಸಜ್ಜನಿಕೆಯ ವ್ಯಕ್ತಿಯನ್ನು ಕಳೆದು ಕೊಂಡಿದ್ದೇವೆ.ಅವರ ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ತಿಳಿಸಿದ್ದಾರೆ.
ಎಂಎಲ್‌ಸಿ ಎಂ.ಕೆ.ಪ್ರಾಣೇಶ್
ರಾಜ್ಯದ ಮುತ್ಸದ್ದಿ ರಾಜಕಾರಣಿ ಹಾಗೂ ಸಚಿವ ಮಹದೇವ ಪ್ರಸಾದ್‌ರ ನಿಧನ ರಾಜ್ಯದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ಹಾನಿಯುಂಟಾಗಿದೆ ಎಂದು ಎಂಎಲ್‌ಸಿ ಎಂ.ಕೆ.ಪ್ರಾಣೇಶ್ ಹೇಳಿಕೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಸರಳ ಮತ್ತು ಸಜ್ಜನಿಕೆಯಿಂದ ಕೂಡಿದ ವ್ಯಕ್ತಿತ್ವ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಹದೇವ ಪ್ರಸಾದ್ ಎಂದು ಸ್ಮರಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಮಹೋನ್ನತ ಆದರ್ಶಪ್ರಾಯರಾಗಿದ್ದ ಮಹದೇವ ಪ್ರಸಾದ್ ಅವರು ತನ್ನ ಇಲಾಖೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದವರು. ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಸಚಿವ ಮಲ್ಲಿಕಾರ್ಜುನ, ಶಾಸಕ ಡಾ. ಶಾಮನೂರು
ದಾವಣಗೆರೆ,ಜ.3: ಸಹಕಾರ ಮತ್ತು ಸಕ್ಕರೆ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸಂತಾಪ ವ್ಯಕ್ತಪಡಿಸಿದ್ದಾರೆ. ನನಗೆ ಅತ್ಯಂತ ಆಪ್ತರಾಗಿದ್ದ ಮಹದೇವ ಪ್ರಸಾದ್ ಅವರು ಅಜಾತ ಶತ್ರು, ಹಾಗೂ ಸಜ್ಜನ ರಾಜಕಾರಣಿಯಾಗಿದ್ದರು. ಅವರಲ್ಲಿ ಕೋಪ ಎಂಬುದನ್ನು ನಾವು ಎಂದೂ ಕಂಡೇ ಇರಲಿಲ್ಲ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದ ಮಹದೇವ ಪ್ರಸಾದ್ ಅವರು ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದರು.ಯಾವುದೇ ಕಪ್ಪುಚುಕ್ಕಿ ಇಲ್ಲದ ಕಳಂಕ-ರಹಿತ ರಾಜಕಾರಣಿಯಾಗಿದ್ದ ಮಹದೇವ ಪ್ರಸಾದ್ ಅವರು ಶಿಸ್ತಿನ ಸಿಪಾಯಿಯಾಗಿದ್ದರು ಎಂದಿದ್ದಾರೆ.
ಅಡಿಕೆ ಮಾರಾಟ ಸಹಕಾರಿ ಸಂಘ
ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನರಾಗಿರುವುದು ಅತೀವ ದುಃಖಕರ ಸಂಗತಿಯಾಗಿದೆ ಎಂದು ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರಿ ಸಂಘ ನಿಯಮಿತದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವ ಮಹದೇವ ಪ್ರಸಾದ್ ನಿಧನಕ್ಕೆ ಲೋಕಸಭಾ ಸದಸ್ಯೆ ಶೋಭಾಕರಂದ್ಲಾಜೆ, ಜಿಪಂ ಅಧ್ಯಕ್ಷೆ ಚೈತ್ರಾಶ್ರೀ ಮಾಲತೇಶ್, ವಿಧಾನಸಭಾ ಸದಸ್ಯರಾದ ಬಿ.ಬಿ ನಿಂಗಯ್ಯ, ಸಿ.ಟಿ ರವಿ, ಡಿ.ಎನ್ ಜೀವರಾಜ್, ಜಿ.ಎಚ್. ಶ್ರೀನಿವಾಸ್, ವೈಎಸ್‌ವಿ ದತ್ತ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಸಂತಾಪ ಸೂಚಿಸಿದ್ದಾರೆ.
ಸಂಸದ ಜಿ.ಎಂ. ಸಿದ್ದೇಶ್ವರ್
ರಾಜ್ಯ ಸರಕಾರದ ಹಾಲಿ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದ ಎಚ್.ಎಚ್ .ಮಹದೇವಪ್ರಸಾದ್, ಅವರ ಅಕಾಲಿಕ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ಸಜ್ಜನಿಕೆಗೆ ಮಹದೇವಪ್ರಸಾದ್ ಹೆಸರುವಾಸಿಯಾಗಿದ್ದರು. ಕುಟುಂಬಕ್ಕೆ ದುಖಃವನ್ನು ಭರಿಸವ ಶಕ್ತಿ ಭಗವಂತ ಕರುಣಿಸಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಕಸ್ಮಿಕ ಬೆಂಕಿ 2 ಲಕ್ಷ ರೂ. ಹಾನಿ
ಮುಂಡಗೋಡ,ಜ.3: ತಾಲೂಕಿನ ಅಜ್ಜಳ್ಳಿಯಲ್ಲಿ ಹಾಗೂ ಟಿಬೆಟ್ ಕ್ಯಾಂಪ್‌ನಲ್ಲಿ ನಡೆದ ಪ್ರತ್ಯೇಕ ಬೆಂಕಿ ಅವಘಡದಿಂದಾಗಿ ಸುಮಾರು 2 ಲಕ್ಷ ರೂ. ನಷ್ಟಸಂಭವಿಸಿರುವ ಘಟನೆ ನಡೆದಿದೆ. ಟಿಬೆಟ್ ಕ್ಯಾಂಪ್ ನ.3 ನಿವಾಸಿ ಪಸಾಂಗ ಎನ್ನುವ ವ್ಯಕ್ತಿಗೆ ಸೇರಿದ ಅಕೇಶಿಯಾ ಪ್ಲಾಂಟೇಶನ್‌ಗೆ ಬೆಂಕಿ ತಗುಲಿ ಸುಮಾರು 1 ಲಕ್ಷ ರೂ. ಹಾನಿಯಾಗಿರುವ ಬಗ್ಗೆ ವರದಿ ಯಾಗಿದೆ. ಅಲ್ಲದೆ, ತಾಲೂಕಿನ ಅಜ್ಜಳ್ಳಿ ಗ್ರಾಮದ ನಾಮದೇವ ಜಾದವ ಎಂಬವರಿಗೆ ಸೇರಿದ ಟ್ರಾಕ್ಟರ್‌ನಲ್ಲಿದ್ದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿದ ಕಾರಣ ಸುಮಾರು 1 ಲಕ್ಷ ರೂ. ಹಾನಿಯಾಗಿದೆ ಎಂದು ತಿಳಿದು ಬಂದಿದೆ. ದುರ್ಘಟನೆ ನಡೆದ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಕಾರ್ಯಾಚರಣೆ ನಡೆಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.







