ಸರಕಾರಿ ಆದೇಶ ಹಿಂಪಡೆಯಲು ರೈತ ಸಂಘ ಆಗ್ರಹ

ಮಂಗಳೂರು, ಜ. 3: ಬೋರ್‌ವೆಲ್ ಕೊರೆಯುವುದಕ್ಕೆ ನಿಷೇಧ ಹೇರುವ ಮೂಲಕ ಸರಕಾರ ರೈತರ ನೀರಿನ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಸರಕಾರ ತಕ್ಷಣ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಕೊಳವೆ ಬಾವಿ ಕೊರೆಯುವುದನ್ನು ತಡೆಗಟ್ಟುವ ರಾಜ್ಯ ಸರಕಾರದ ಆದೇಶವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಡ ಮತ್ತು ಮಧ್ಯಮದ ವರ್ಗದ ಕೃಷಿಕರು ನೀರಿಗಾಗಿ ಪರದಾಡುವಂತಾಗಿದೆ. ಕೊಳವೆಬಾವಿ ಕೊರೆಯಲು ಸರಕಾರ ನಿಷೇಧ ಹೇರಿರುವುದರಿಂದ ರೈತ ವರ್ಗವು ಕಂಗಾಲಾಗಿದೆ. ರಾಜ್ಯ ಸರಕಾರ ರೈತರ ತಾಳ್ಮೆ ಪರೀಕ್ಷಿಸಬಾರದು. ಕೊಳವೆ ಬಾವಿ ತಡೆಯಲು ಮುಂದಾದರೆ ಪ್ರತಿರೋಧವನ್ನು ಎದುರಿಸಲು ಮುಂದಾಗಬೇಕಾದೀತು ಎಂದು ಪುಣಚ ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಕೊಜಂಬೆ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ. ಆದರೂ ರೈತ ವರ್ಗದ ಮೇಲೆ ಸರಕಾರದ ಬಲಪ್ರಯೋಗ ಹೆಚ್ಚುತ್ತಲೇ ಇದೆ. ಇದನ್ನು ತಡೆಗಟ್ಟಬೇಕಾದರೆ ರೈತರು ಸಂಘಟಿತರಾಗಬೇಕು. ಬೋರ್‌ವೆಲ್ ಕೊರೆಯುವುದನ್ನು ನಿಷೇಧಿಸಿ ಸರಕಾರ ಹೊರಡಿಸಿದ ಆದೇಶ ಕರಾವಳಿ ರೈತರ ಪಾಲಿಗೆ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪೆರಾಬೆ, ಇಬ್ರಾಹೀಂ ಖಲೀಲ್, ರೋನಿ ಮೆಂಡೊನ್ಸಾ ಮೂಡುಬಿದಿರೆ, ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಸುಧಾಕರ ಜೈನ್, ಕಾರ್ಯದರ್ಶಿ ಸತ್ಯಶಂಕರ್ ಭಟ್, ಬಂಟ್ವಾಳ ತಾಲೂಕು ರೈತ ಮುಖಂಡ ಸತೀಶ್ಚಂದ್ರ ರೈ, ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸುಳ್ಯ ತಾಲೂಕು ಉಪಾಧ್ಯಕ್ಷ ತಾರಾನಾಥ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.







