ಹೋರಿ ಬೆದರಿಸುವ ಸ್ಪರ್ಧೆ ಪ್ರಕರಣ
9 ಜನರಿಗೆ ನ್ಯಾಯಾಂಗ ಬಂಧನ
ಶಿವಮೊಗ್ಗ, ಜ. 3: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಸಮೀಪದ ತಲ್ಲೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನವಟ್ಟಿ ಠಾಣೆ ಪೊಲೀಸರು ಸ್ಪರ್ಧೆ ಆಯೋಜಿಸಿದ್ದ 9 ಜನರನ್ನು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳನ್ನು ಮಂಗಳವಾರ ಬೆಳಗ್ಗೆ ಸೊರಬ ಪಟ್ಟಣದ ನ್ಯಾಯಾಲಯದ ಮುಂಭಾಗ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಎಲ್ಲ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ತಲ್ಲೂರು ಗ್ರಾಮದವರೇ ಆದ ಸಿದ್ದಪ್ಪ, ಮಲ್ಲಿಕಾರ್ಜುನ, ಮಂಜುನಾಥ್, ಹನುಮಂತಪ್ಪ, ಸತೀಶ್, ಹುಚ್ಚಪ್ಪ, ಹನುಮೇಶ್, ಕೊಟ್ರೇಶ್ ಹಾಗೂ ಮತ್ತೋರ್ವ ಯುವಕ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಪ್ರಾಣಿ ಹಿಂಸೆ, ಅನುಮತಿಯಿಲ್ಲದೆ ಸ್ಪರ್ಧೆ ಆಯೋಜನೆ ಸೇರಿದಂತೆ ಐಪಿಸಿಯ ವಿವಿಧ ಕಾಯ್ದೆಗಳಡಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅನುಮತಿಯಿಲ್ಲದೆ ಸ್ಪರ್ಧೆ ಆಯೋಜನೆ ಸೋಮವಾರ ತಲ್ಲೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಗ್ರಾಮದವರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಜನರು ಭಾಗವಹಿಸಿದ್ದು, ಸಾವಿರಾರು ಜನ ನೆರೆದಿದ್ದರು.
ಆದರೆ, ಈ ಸ್ಪರ್ಧೆ ಆಯೋಜಿಸಿದ್ದವರು ಸ್ಥಳೀಯ ಪೊಲೀಸ್ ಠಾಣೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಸ್ಪರ್ಧೆ ಆಯೋಜಿಸದಂತೆ ಆಯೋಜಕರಿಗೆ ಪೊಲೀಸರು ನೋಟಿಸ್ ಕೂಡ ಹೊರಡಿಸಿದ್ದರು. ಇದರ ಹೊರತಾಗಿಯೂ ಆಯೋಜಕರು ಸ್ಪರ್ಧೆ ಹಮ್ಮಿಕೊಂಡಿದ್ದರು. ಈ ಘಟನೆ ನಡೆದ ನಂತರ ಸ್ಪರ್ಧೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆನವಟ್ಟಿ ಠಾಣೆ ಪೊಲೀಸರು ಸ್ಪರ್ಧೆ ಆಯೋಜಿಸಿದ್ದವರನ್ನು ವಶಕ್ಕೆ ಪಡೆದಿದ್ದರು.







